ಬೀಜಿಂಗ್: ಬಂಡವಾಳ ಹೂಡಿಕೆಗೆ ಹೆಚ್ಚು ಮಹತ್ವಕೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಆಧುನಿಕ ಮೂಲಸೌಕರ್ಯಕ್ಕಾಗಿ ನಾವು ಹೂಡಿಕೆಯನ್ನು ಹೆಚ್ಚಿಸಬೇಕಿದೆ ಎಂದು ಹೇಳಿದ್ದಾರೆ.
ಚೀನಾ ಪ್ರವಾಸದ ಎರಡನೇ ದಿನ ಶಿನ್ ಗುವಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಭಾರತ ಮತ್ತು ಚೀನಾ ಬದಲಾಗುತ್ತಿರುವ ದೇಶಗಳಾಗಿದ್ದು, ಆರ್ಥಿಕವಾಗಿ ನಾವು ಸಾಕಷ್ಟು ಬದಲಾಗುವ ಅಗತ್ಯ ಇದೆ ಎಂದು ಹೇಳಿದರು.
ಇದೇ ವೇಳೆ ಚೀನಾದ ಆರ್ಥಿಕ ಅಭಿವೃದ್ಧಿಯನ್ನು ಹೊಗಳಿದ ಮೋದಿ, ಕಳೆದ ಮೂರು ದಶಕಗಳಲ್ಲಿ ಚೀನಾ ಸಾಕಷ್ಟು ಅಭಿವೃದ್ಧಿ ಸಾಧಿಸಿದೆ. ಆರ್ಥಿಕ ಪವಾಡವೇ ನಡೆಸಿ ಇತರೆ ದೇಶಗಳಿಗೆ ಮಾದರಿಯಾಗಿದ್ದೀರಿ ಎಂದರು. ಚೀನಾ ನಂತರ ಇದೀಗ ಭಾರತ ಸಹ ಜಾಗತಿಕ ಆರ್ಥಿಕ ಕ್ರಾಂತಿಯಲ್ಲಿ ಮೊದಲ ಸ್ಥಾನದಲ್ಲಿದೆ ಎಂದರು.
ಶಿಕ್ಷಣ ಎನ್ನುವುದು ಸಂಪತ್ತು ಇದ್ದಂತೆ. ಶಿಕ್ಷಣ ಕೊಡು ಕೊಳ್ಳುವಿಕೆಯನ್ನು ಹೆಚ್ಚು ಮಾಡುತ್ತದೆ ಎಂದರು. ಸಂಶೋಧನೆಯಲ್ಲಿ ಚೀನಾದ ಸಾಧನೆ ಅಭೂತಪೂರ್ವವಾದದ್ದು. ಭಾರತ ಮತ್ತು ಚೀನಾಕ್ಕೆ ಒಂದೇ ರೀತಿಯ ಸವಾಲುಗಳಿವೆ. ಎಲ್ಲರ ಸಹಕಾರದ ಜೊತೆ ಭಾರತ ವೇಗವಾಗಿ ಅಭಿವೃದ್ಧಿ ಹೊಂದಲಿದೆ ಎಂದು ಪ್ರಧಾನಿ ವಿಶ್ವಾಸವ್ಯಕ್ತಪಡಿಸಿದರು.