ಕುಂದಾಪುರ: ಸ್ಕಾರ್ಪಿಯೋ ವಾಹನವೊಂದರಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಜಾನುವಾರುಗಳನ್ನು ವಾಹನ ಸಮೇತ ಪೊಲೀಸರು ತಡೆದು ವಶಕ್ಕೆ ಪಡೆದುಕೊಂಡಿದ್ದು, ಆರೋಪಿ ಚಾಲಕ ಪರಾರಿಯಾಗಿರುವ ಘಟನೆ ಬುಧವಾರ ಬೈಂದೂರಿನ ನಂದನವನ ಸಮೀಪ ನಡೆದಿದೆ.
ಭಟ್ಕಳ ಕಡೆಯಿಂದ ಸ್ಕಾರ್ಪಿಯೋ ವಾಹನವೊಂದರಲ್ಲಿ ದನಗಳನ್ನು ಸಾಗಿಸಲಾಗುತ್ತಿದೆ ಎನ್ನುವ ಮಾಹಿತಿಯನ್ನಾಧರಿಸಿ ಶಿರೂರು ಚೆಕ್ ಪೋಸ್ಟ್‌ನಲ್ಲಿ ಸಿಬ್ಬಂದಿಗಳು ವಾಹನವನ್ನು ತಡೆದಿದ್ದರೆನ್ನಲಾಗಿದೆ. ಆದರೆ ಆ ಸಂದರ್ಭ ಚಾಲಕ ವಾಹನವನ್ನು ನಿಲ್ಲಿಸದೇ ತಪ್ಪಿಸಿಕೊಂಡು ಬಂದಿದ್ದ ಎನ್ನಲಾಗಿದೆ. ತಕ್ಷಣ ಬೈಂದೂರು ಪೊಲೀಸರಿಗೆ ಸಿಬ್ಬಂದಿಗಳು ಮಾಹಿತಿ ನೀಡಿದ್ದು, ಬೈಂದೂರಿನ ನಂದನವನ ಸಮೀಪ ಪೊಲೀಸರು ವಾಹನವನ್ನು ಅಡ್ಡಗಟ್ಟಿದ್ದಾರೆ. ಈ ಸಂದರ್ಭ ವಾಹನವನ್ನು ನಿಲ್ಲಿಸಿದ ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ. ಪೊಲೀಸರು ವಾಹನವನ್ನು ಪರಿಶೀಲಿಸಿದಾಗ ಸ್ಕಾರ್ಪಿಯೋದಲ್ಲಿ ಒಂಭತ್ತು ಜಾನುವಾರುಗಳನ್ನು ತುಂಬಿಸಿಲಾಗಿತ್ತು. ದನಗಳ ಕೈಕಾಲು ಕಟ್ಟಿ ಹಾಕಲಾಗಿದ್ದು, ಹಿಂಸೆ ತಡೆಯಲಾರದೆ 5 ದನಗಳು ವಾಹನದಲ್ಲಿಯೇ ಮೃತಪಟ್ಟಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ವಾಹನದ ಬಾಗಿಲು ತೆರೆಯುವ ವೇಳೆ ಒಂದು ದನ ಜೀವ ಭಯಕ್ಕೆ ಓಡಿ ಹೋಗಿದ್ದು, ಮೂರು ದನಗಳನ್ನು ಮತ್ತು ವಾಹನವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.