ಮಂಗಳೂರು,ಮೇ.22: ಕಟ್ಟಡ ಕಾಮಗಾರಿಗೆಗೆ ನುರಿತ ಗಾರೆ ಕೆಲಸಗಾರರ ಕೊರತೆ ಇರುವುದರಿಂದಾಗಿ ಕಟ್ಟಡದ ಗೋಡೆ ಪ್ಲಾಸ್ಟರಿಂಗ್ ಮಾಡಲು ‘ವಾಲ್ ಪ್ಲಾಸ್ಟರಿಂಗ್’ ಯಂತ್ರವನ್ನು ಕೆಂಜಾರು ಶ್ರೀದೇವಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳು ಕಾಲೇಜಿನ ಪ್ರಾಂಶುಪಾಲ ಡಾ. ದಿಲೀಪ್ ಕುಮಾರ್ ಕೆ. ಮತ್ತು ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಪ್ರೊ.ಕೆ ಸುರೇಶ್ ಮುಂಜೆ ನೇತೃತ್ವದಲ್ಲಿ ಈ ನೂತನ ಆವಿಷ್ಕಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಯಂತ್ರವು ವಿದ್ಯುತ್ ಚಾಲಿತ ವಾಗಿದ್ದು, 3 ಫೇಸ್ ಎಸಿ ವಿದ್ಯುತ್ ಅಗತ್ಯವಿರುತ್ತದೆ. ಸುಮಾರು 10 ಅಡಿ ಎತ್ತರದ ಗೋಡೆಯನ್ನು ಗಾರೆ ಮಾಡುವಂತೆ ಯಂತ್ರವನ್ನು ವಿನ್ಯಾಸ ಮಾಡಲಾಗಿದೆ. ಮೊದಲಿಗೆ ಸರಿಯಾದ ಪ್ರಮಾಣದಲ್ಲಿ ಸಿಮೆಂಟ್, ಮರಳು ಹಾಗೂ ನೀರನ್ನು ಮಿಶ್ರಣ ಮಾಡಿ ಯಂತ್ರದ ಟ್ರೇಗೆ ಹಾಕಬೇಕು. ಟ್ರೇ ಮುಂಭಾಗದಲ್ಲಿರುವ ಮೋಟಾರು ಚಾಲಿತ ರೋಟಾರ್ ನಿರಂತರವಾಗಿ ಸಿಮೆಂಟ್ ಮಿಶ್ರಣವನ್ನು ಗೋಡೆಗೆ ಎರಚುತ್ತದೆ. ಟ್ರೇಗೆ ಕೆಳಭಾಗದಲ್ಲಿರುವ ಮೆಟಾಲಿಕ್ ಪ್ಲೇಟ್ ಗೋಡೆಗೆ ಸರಿಯಾದ ಒತ್ತಡ ಹಾಕಿ, ಗಾರೆಯನ್ನು ಸಮತಲಗೊಳಿಸಿ ನುಣ ಪಾದ ಮೇಲ್ಮೈಯನ್ನು ನೀಡುತ್ತದೆ.
ಈ ಯಂತ್ರವನ್ನು ಬಳಸಿಕೊಂಡು ಕಾಂಕ್ರೀಟ್ ಬ್ಲಾಕ್, ಇಟ್ಟಿಗೆ ಮತ್ತು ಕೆಂಪು ಕಲ್ಲಿನ ಗೋಡೆಯನ್ನು ಗಾರೆ ಮಾಡ ಬಹುದಾಗಿದೆ. ಯಂತ್ರದ ಸಹಾಯದಿಂದ ಒಮ್ಮೆಗೆ 2.5 ಅಡಿ ಅಗಲ ಮತ್ತು 10 ಅಡಿ ಎತ್ತರದಷ್ಟು ಗೋಡೆಯನ್ನು ಗಾರೆ ಮಾಡಲಾಗುತ್ತದೆ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.