ಸುಮಾರು 42 ವರ್ಷಗಳ ಕಾಲ ಅರುಣಾ ಶಾನಭಾಗ್ ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ ಕೋಮಾವಸ್ಥೆಯಲ್ಲಿ ಮಲಗಿದ್ದರು. ಸುಪ್ರೀಂ ಕೋರ್ಟ್‌ನ ಕದ ತಟ್ಟಿದ ದಯಾಮರಣಕ್ಕೆ ಸಂಬಂಧಿಸಿದ ಪ್ರಕರಣವೊಂದಕ್ಕೆ ಆಕೆ ವಿಷಯವಾಗಿದ್ದರು. ದಯಾಮರಣಕ್ಕೆ ಅವಕಾಶ ನೀಡುವ ಕಾನೂನೊಂದರಲ್ಲಿ ಆಕೆಯ ಹೆಸರು ನಮೂದಾಗಿದ್ದರೂ, ಆ ಕಾನೂನು ಆಕೆಗೆ ಅನ್ವಯವಾಗಲಿಲ್ಲ.
ಅರುಣಾ ಶಾನಭಾಗ್ ನಿಧನಕ್ಕೆ ಸಂಬಂಧಿಸಿದಂತೆ ವರದಿಗಳು ದಿನಪತ್ರಿಕೆಗಳಲ್ಲಿ ಮೊದಲ ಪುಟದ ಸುದ್ದಿಯಾಗಿದ್ದರಲ್ಲಿ ಯಾವುದೇ ಅಚ್ಚರಿಯಿಲ್ಲ. ಆಕೆಗೆ ಸಂಬಂಧಿಸಿದ ಪ್ರಕರಣ ಕಡಿಮೆ ಮಹತ್ವದ ಸಂಗತಿಯಾಗಿರಲಿಲ್ಲ. ಆದರೂ ಆಕೆಗೆ ಈ ಸ್ಥಿತಿಯನ್ನು (ಬಾಡಿ ಹೋದ ತರಕಾರಿಯಂತಹ) ತಂದಿಕ್ಕಿರುವ ವ್ಯಕ್ತಿ ಸತ್ತಿದ್ದಾನೆಯೇ ಇಲ್ಲವೇ ಬದುಕಿದ್ದಾನೆಯೇ ಎಂಬುದು ಯಾರಿಗೂ ಗೊತ್ತಿಲ್ಲ. ಆತ ಕಾರಾಗೃಹದಲ್ಲಂತೂ ಇಲ್ಲ ಎಂಬುದು ಮಾತ್ರ ಖಚಿತ ಸುದ್ದಿ.
1973, ನವೆಂಬರ್ 27ರಂದು ಅರುಣಾ ಶಾನಭಾಗ್ ಮೇಲೆ ಅತ್ಯಾಚಾರ (?) ನಡೆಯಿತು. ಆಕೆಯ ಮೇಲೆ ಅತ್ಯಾಚಾರಗೈದ ಸೋಹನ್‌ಲಾಲ್ ಭಾರ್ಥ ವಾಲ್ಮೀಕಿ 1980ರಲ್ಲಿ ಕಾರಾಗೃಹದಿಂದ ಬಿಡುಗಡೆಗೊಂಡು ನಂತರ ನಾಪತ್ತೆಯಾದ. ಅರುಣಾ ಶಾನಭಾಗ್ ಜೀವನಚರಿತ್ರೆ ಬರೆದಿರುವ ಲೇಖಕಿ ಪಿಂಕಿ ವಿರಾನಿ (ಅರುಣಾಗೆ ದಯಾಮರಣ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದವರು) ಕೃತಿಯ ಪ್ರಕಾರ, ಆಸ್ಪತ್ರೆಯಲ್ಲಿ ವೈದ್ಯಕೀಯ ಪ್ರಯೋಗಗಳಿಗಾಗಿ ಬಳಸುವ ನಾಯಿಗಳ ತಿಂಡಿಪದಾರ್ಥಗಳನ್ನು ವಾಲ್ಮೀಕಿ ಕದಿಯುತ್ತಿದ್ದ. ಆತನ ಕಳ್ಳತನದ ಕೃತ್ಯಗಳನ್ನು ಮೇಲಿನ ಅಧಿಕಾರಿಗಳಿಗೆ ತಿಳಿಸುವುದಾಗಿ ಅರುಣಾ ಬೆದರಿಸಿದ್ದಳು. ಇದರಿಂದ ಆಕೆ ವಾಲ್ಮೀಕಿಯ ಕೋಪಕ್ಕೆ ತುತ್ತಾಗಿದ್ದಳು.
ಈ ಘಟನೆ ನಡೆದು ನಾಲ್ಕು ದಶಕಗಳ ನಂತರ ಪ್ರಕರಣಕ್ಕೆ ಐಪಿಸಿ 302 (ಕೊಲೆ) ಸೆಕ್ಷನ್ ಸೇರ್ಪಡೆಗೊಳಿಸುವ ಸಾಧ್ಯತೆಗಳನ್ನು ಮುಂಬೈ ಪೊಲೀಸರು ಪರಿಶೀಲಿಸುತ್ತಿದ್ದಾರಂತೆ. ಅದೂ ಕೂಡ ವಾಲ್ಮೀಕಿ ಮತ್ತೆ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಲ್ಲಿ ಮಾತ್ರ! ಮುಂಬೈನ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿದ್ದರೂ ವಾಲ್ಮೀಕಿ ಬಗ್ಗೆ ಯಾವುದೇ ಮಾಹಿತಿಗಳು ಈಗ ಲಭ್ಯವಿಲ್ಲ. ಬುಲಂದ್‌ಶಹರ್‌ನ ನಿವಾಸಿಯಾಗಿದ್ದ ಈತ, ಅರುಣಾ ಶಾನಭಾಗ್ ಮೇಲೆ ಅತ್ಯಾಚಾರಗೈಯುವ ಮೊದಲೇ ಮದುವೆಯಾಗಿದ್ದ. ಮುಂಬೈನ ಆಸ್ಪತ್ರೆ ಮತ್ತು ಪೊಲೀಸ್ ದಾಖಲೆಗಳು ಇಲ್ಲವೇ ನ್ಯಾಯಾಲಯದ ಕಡತಗಳಲ್ಲಿ ಈತನ ಒಂದೇ ಒಂದು ಫೋಟೊ ಕೂಡ ಲಭ್ಯವಿಲ್ಲ!
‘ಗರಿಷ್ಠ 20 ವರ್ಷಗಳ ತನಕ ನಾವು ಕಡತಗಳನ್ನು ಉಳಿಸಿಕೊಳ್ಳಬಹುದು. ಈ ಪ್ರಕರಣ 40 ವರ್ಷಗಳಿಗೂ ಹಿಂದಿನದು. ಅರುಣಾ ಶಾನಭಾಗ್ ಪ್ರಕರಣದ ಕಡತಗಳು ದಾಖಲೆಗಳ ವಿಭಾಗದಲ್ಲಿ ಲಭ್ಯವಿದೆಯೇ ಎಂಬುದು ಖಚಿತವಾಗಿ ಹೇಳಲು ಸಾಧ್ಯವಿಲ್ಲ’ ಎಂದು ಭೊಯಿವಾಡ ಪೊಲೀಸ್ ಠಾಣೆಯಲ್ಲಿ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಆಗಿರುವ ಸುನಿಲ್ ತೊಂಡ್‌ವಾಲ್ಕರ್ ಹೇಳುತ್ತಾರೆ. 1973ರಲ್ಲಿ ಇದೇ ಪೊಲೀಸ್ ಠಾಣೆಯಲ್ಲಿ ಮೂಲ ಪ್ರಕರಣವನ್ನು ದಾಖಲಿಸಲಾಗಿತ್ತು.
ಕಾರಾಗೃಹ ಶಿಕ್ಷೆ ಮುಗಿಸಿ ಬಿಡುಗಡೆಗೊಂಡ ನಂತರ ಸೋಹನ್‌ಲಾಲ್ ವಾಲ್ಮೀಕಿ ದಿಲ್ಲಿಗೆ ತೆರಳಿದ್ದ. ತನ್ನ ಗುರುತನ್ನು ಮರೆಮಾಚಿಕೊಂಡು ದಿಲ್ಲಿಯ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದನೆಂದು ಮುಂಬೈ ಆಸ್ಪತ್ರೆಯ ವಾರ್ಡ್ ಬಾಯ್‌ಗಳು ತನಗೆ ತಿಳಿಸಿದ್ದಾರೆಂದು ಪಿಂಕಿ ವಿರಾನಿ ತಮ್ಮ ಕೃತಿಯಲ್ಲಿ ಬರೆದಿದ್ದಾರೆ. ಇದು ನಿಜವೇ ಎಂದಾದಲ್ಲಿ, ಅರುಣಾ ಶಾನಭಾಗ್ ಕುತ್ತಿಗೆಗೆ ನಾಯಿ ಸರಪಳಿಯಿಂದ ಬಿಗಿದು ಅತ್ಯಾಚಾರಗೈದ ವಾಲ್ಮೀಕಿಗೆ ಇನ್ನೊಂದು ಆಸ್ಪತ್ರೆಯಲ್ಲಿ ಕೆಲಸ ಹಾಗೂ ಎರಡನೆ ಬದುಕು ಲಭಿಸಿದೆ ಎಂದಾಯಿತು. ಜೊತೆಗೆ ಈ ಕಥೆ ನಮ್ಮನ್ನು ಬೆಚ್ಚಿ ಬೀಳಿಸುತ್ತದೆ.
ಅತ್ಯಾಚಾರವಲ್ಲ: ಅಂದು ರಾತ್ರಿ ಆಸ್ಪತ್ರೆಯ ಶಸ್ತ್ರಚಿಕಿತ್ಸೆಯ ಕೋಣೆಯಲ್ಲಿ ಅರುಣಾ ಶಾನಭಾಗ್ ತನ್ನ ಉಡುಪನ್ನು ಬದಲಿಸಿಕೊಂಡ ನಂತರ ಅತ್ಯಾಚಾರಕ್ಕೊಳಗಾದಳು ಎಂಬುದು ಎಲ್ಲರೂ ತಿಳಿದುಕೊಂಡಿರುವ ವಿಷಯ. ಆದರೆ, ಮುಂಬೈ ಪೊಲೀಸರ ದಾಖಲೆಗಳು ಮತ್ತು ಎಫ್‌ಐಆರ್‌ನಲ್ಲಿ ಎಲ್ಲಿಯೂ ಅತ್ಯಾಚಾರದ ವಿಷಯ ಪ್ರಸ್ತಾಪವಾಗುವುದಿಲ್ಲ ಎಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಆಕೆಯ ಕನ್ಯತ್ವಕ್ಕೆ ಹಾನಿಯಾಗಿಲ್ಲ ಎಂಬುದು ವೈದ್ಯಕೀಯ ಪರೀಕ್ಷೆಯಿಂದ ಸಾಬೀತಾಗಿತ್ತು. ಆಕೆ ಅನೈಸರ್ಗಿಕ ಲೈಂಗಿಕ ಕೃತ್ಯಕ್ಕೆ ಒಳಗಾಗಿದ್ದಳು ಎಂಬುದನ್ನು ನ್ಯಾಯಾಲಯವೂ ಗಣನೆಗೆ ತೆಗೆದುಕೊಳ್ಳಲಿಲ್ಲ.
‘ಆರೋಪಿಯು ಅತ್ಯಾಚಾರದ ದುರುದ್ದೇಶದೊಂದಿಗೆ ಅಲ್ಲಿಗೆ ತೆರಳಿದ್ದನು’ ಎಂದು ನ್ಯಾಯಾಲಯದ ತೀರ್ಪು ಹೇಳುತ್ತದೆ. ಆದರೆ ವಾಲ್ಮೀಕಿಯ ಮೇಲೆ ಅತ್ಯಾಚಾರದ ಆರೋಪವನ್ನೇ ಹೊರಿಸಿರಲಿಲ್ಲ. ಅರುಣಾ ಶಾನಭಾಗ್ ವಾಚು ಮತ್ತು ಕಿವಿಯ ರಿಂಗ್‌ಗಳನ್ನು ಆರೋಪಿ ಕದ್ದು ಒಯ್ದಿದ್ದ. ಹೀಗಾಗಿ ನ್ಯಾಯಾಲಯವು ಕೊಲೆ ಪ್ರಯತ್ನ ಮತ್ತು ದರೋಡೆಯ ಪ್ರಕರಣದಲ್ಲಿ ವಾಲ್ಮೀಕಿಗೆ ಶಿಕ್ಷೆ ನೀಡಿತ್ತು.
ಇದಕ್ಕೆ ಇನ್ನೊಂದು ಕಾರಣವಿದೆ. ಅರುಣಾ ಶಾನಭಾಗ್ ಪ್ರೇಮಿಯಾಗಿದ್ದ ಜ್ಯೂನಿಯರ್ ವೈದ್ಯರೊಬ್ಬರು ಅತ್ಯಾಚಾರ ಆರೋಪದಿಂದ ಆಕೆಯ ಹೆಸರಿಗೆ ಕಳಂಕ ಬರುತ್ತದೆ ಎಂದು ಭಾವಿಸಿದ್ದರು. ಈ ವಿಷಯದಲ್ಲಿ ಅರುಣಾ ಶಾನಭಾಗ್ ಅಭಿಪ್ರಾಯವೇನು ಎಂದು ತಿಳಿದುಕೊಳ್ಳುವುದು ಅಂದು ಸಾಧ್ಯವಿರಲಿಲ್ಲ ಎಂಬುದು ಕೂಡ ಅಷ್ಟೇ ಸತ್ಯ.
ಅರುಣಾ ಶಾನಭಾಗ್ ಪ್ರೇಮಿಗೆ ‘ಸಾರ್ವಜನಿಕ ಮುಜುಗರ’ ಉಂಟಾಗುವುದನ್ನು ತಪ್ಪಿಸಲು ಆಸ್ಪತ್ರೆಯಲ್ಲಿ ಅಂದು ಡೀನ್ ಆಗಿದ್ದ ಡಾ.ದೇಶಪಾಂಡೆಯವರು ಅನೈಸರ್ಗಿಕ ಲೈಂಗಿಕ ಕೃತ್ಯವನ್ನು ವರದಿ ಮಾಡಲಿಲ್ಲ ಎಂದು ಪತ್ರಿಕಾ ವರದಿಗಳು ತಿಳಿಸುತ್ತವೆ. ಅಂದು ಅರುಣಾ ಶಾನಭಾಗ್ ಋತುಸ್ರಾವದ ಅವಧಿಯಲ್ಲಿದ್ದ ಕಾರಣ ಆರೋಪಿಯು ಆಕೆಯ ಮೇಲೆ ಸಹಜ ಸಂಭೋಗ ನಡೆಸಲಿಲ್ಲ. ಆದರೂ ಆತನ ವಿರುದ್ಧ ಐಪಿಸಿ 377ನೆ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಬಹುದಾಗಿತ್ತು. ಈ ಪ್ರಕರಣದಲ್ಲಿ ಅರುಣಾ ಶಾನಭಾಗ್ ಪ್ರೇಮಿ ವೈದ್ಯರು ದೂರುದಾರರು ಕೂಡ ಆಗಿರಲಿಲ್ಲ.
ಮುಂದೊಂದು ದಿನ ಅರುಣಾ ಶಾನಭಾಗ್‌ಗೆ ಪ್ರಜ್ಞೆ ಬರಬಹುದು, ಆಕೆ ಚೇತರಿಸಿಕೊಳ್ಳಬಹುದು. ಆಕೆಯನ್ನು ತಾನು ಮದುವೆ ಯಾಗಬಹುದು ಎಂಬ ಆಶಾ ಭಾವನೆಯನ್ನು ಆ ವೈದ್ಯರು ಹೊಂದಿದ್ದರು ಎಂದು ಆಸ್ಪತ್ರೆಯ ನಿವೃತ್ತ ಮೆಟ್ರನ್‌ವೊಬ್ಬರು ಹೇಳುತ್ತಾರೆ. ಆದರೆ, ಅದಾವುದೂ ನಡೆಯಲಿಲ್ಲ. ತದನಂತರ, ಅವರು ಬೇರೆ ಮದುವೆ ಮಾಡಿಕೊಂಡು ವಿದೇಶಕ್ಕೆ ತೆರಳಿದರು. ಅರುಣಾ ಶಾನಭಾಗ್ ಜೀವನವಡೀ ಆಸ್ಪತ್ರೆಯ ಹಾಸಿಗೆಯಲ್ಲೇ ಕಳೆದಳು. ಆಕೆಯ ಜೀವನದ ಮೇಲೆ ನ್ಯಾಯಾಲಯದಲ್ಲಿ ಕಾನೂನು ಹೋರಾಟಗಳು ನಡೆದವು. ಏಳು ವರ್ಷಗಳ ಕಾರಾಗೃಹ ಶಿಕ್ಷೆ ಮುಗಿಸಿಕೊಂಡು ವಾಲ್ಮೀಕಿ ಹೊಸ ಜೀವನ ನಡೆಸಿದ. ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ ಮಲಗಿದ್ದ ತಮ್ಮ ಸಹೋದ್ಯೋಗಿಯೊಬ್ಬಳನ್ನು ಹಲವು ತಲೆಮಾರುಗಳ ನರ್ಸ್‌ಗಳು ನೋಡಿಕೊಂಡ ರೀತಿ ಕುರಿತಂತೆ ಬಹಳಷ್ಟು ಒಳ್ಳೆಯ ಮಾತುಗಳು ಕೇಳಿಬಂದಿವೆ. ನಾಲ್ಕು ದಶಕಗಳ ಕಾಲ ಪ್ರತಿದಿನವೂ ಅರುಣಾ ಶಾನಭಾಗ್‌ಗೆ ನ್ಯಾಯ, ಗೌರವವನ್ನು ತಂದುಕೊಟ್ಟಿರುವ ದಾದಿಯರು ‘ನೈಜ ಭಾರತ ರತ್ನರು’ ಎಂದು ಪತ್ರಕರ್ತೆ ಸಾಗರಿಕಾ ಘೋಷ್ ಟ್ವೀಟ್ ಮಾಡಿದ್ದಾರೆ. ಅವರೆಲ್ಲ ಗೌರವ ತಂದುಕೊಟ್ಟಿರುವುದು ನಿಜ. ನ್ಯಾಯ? ಲಭಿಸಿಲ್ಲ ಎಂದೇ ಹೇಳಬೇಕು. 1973ರಲ್ಲಿ ವ್ಯವಸ್ಥೆ ಆಕೆಗೆ ನ್ಯಾಯ ದೊರಕಿಸಿಕೊಡುವಲ್ಲಿ ವಿಫಲವಾಯಿತು. ಆಕೆಯ ಹೆಸರಿಗೆ ಕಳಂಕ ಉಂಟಾಗುತ್ತದೆ ಎಂಬ ಏಕೈಕ ಕಾರಣದಿಂದ ಆರೋಪಿಯ ಕೃತ್ಯವನ್ನು ಮುಚ್ಚಿ ಹಾಕಲಾಯಿತು. ಅಂದು ಆಕೆಗೆ ನ್ಯಾಯ ಲಭಿಸಲಿಲ್ಲ. ವಾಲ್ಮೀಕಿ ಬದುಕಿದ್ದಾನೋ, ಇಲ್ಲವೋ ಎಂಬುದು ತಮಗೆ ಗೊತ್ತಿಲ್ಲ ಎಂದು ಪೊಲೀಸರು ಹೇಳುತ್ತಾರೆ. ಹೀಗಾಗಿ ಇಂದು ಕೂಡ ಆಕೆಗೆ ನ್ಯಾಯ ಸಿಕ್ಕಿಲ್ಲ. ಪಿಂಕಿ ವಿರಾನಿಯವರು ಅತ್ಯಾಚಾರದ ಎಫ್‌ಐಆರ್ ದಾಖಲಿಸಲು ಮುಂದಾದಾಗ, ವಾಲ್ಮೀಕಿಯನ್ನು ಪತ್ತೆ ಮಾಡುವುದು ಸಾಧ್ಯವಿಲ್ಲ. ವಾರಂಟ್ ನೋಟಿಸ್ ಈ ಪ್ರಕರಣದಲ್ಲಿ ಕೆಲಸ ಮಾಡದು ಎಂದು ದಿಲ್ಲಿ ಪೊಲೀಸರೇ ತಿಳಿಸಿದರಂತೆ.
ಅರುಣಾ ಶಾನಭಾಗ್ ಮೇಲೆ ಸೋಹನ್‌ಲಾಲ್ ವಾಲ್ಮೀಕಿ ಸುಮಾರು ಹತ್ತು ನಿಮಿಷಗಳ ಕಾಲ ದೈಹಿಕ ದೌರ್ಜನ್ಯ ನಡೆಸಿದ್ದನಂತೆ. ಆರೋಪಿಗೆ ಏಳು ವರ್ಷಗಳ ಕಾರಾಗೃಹ ಶಿಕ್ಷೆ ಲಭಿಸಿತು. ಅರುಣಾ ಜೀವಮಾನವಡೀ ಶಿಕ್ಷೆ ಅನುಭವಿಸಿದಳು.