ಕರ್ನಾಟಕ

ಕೇಂದ್ರ ಸರ್ಕಾರದಿಂದ ನೀತಿ-ಸಂಹಿತೆ ಉಲ್ಲಂಘನೆ : ಆರೋಪ

Pinterest LinkedIn Tumblr

H.Anjaneya

ಬೆಂಗಳೂರು, ಮೇ 28- ಕೇಂದ್ರ ಸರ್ಕಾರ ರಾಜ್ಯದ ಗ್ರಾಮ ಪಂಚಾಯ್ತಿ ಚುನಾವಣೆ ನೀತಿ-ಸಂಹಿತೆ ಉಲ್ಲಂಘಿಸಿ ಪತ್ರಿಕೆಗಳಲ್ಲಿ ಜಾಹೀರಾತು ನೀಡುತ್ತಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಆರೋಪಿಸಿದರು.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು,

ಕಳೆದ ಎರಡು-ಮೂರು ದಿನಗಳಿಂದ ನಿರಂತರವಾಗಿ ಕೇಂದ್ರ ಸರ್ಕಾರ ಪತ್ರಿಕೆಗಳಲ್ಲಿ ತನ್ನ ಒಂದು ವರ್ಷದ ಅವಧಿ ಪೂರೈಸಿರುವ ಕುರಿತಂತೆ ಜಾಹೀರಾತು ನೀಡುತ್ತಿದೆ. ಈ ಸಂಬಂಧ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಇದಕ್ಕೆ ಕಡಿವಾಣ ಹಾಕಬೇಕು ಎಂದರು. ನಮ್ಮ ಸರ್ಕಾರ ಎರಡು ವರ್ಷ ಪೂರೈಸಿದ್ದರೂ ನಾವು ನೀತಿ-ಸಂಹಿತೆ ಹಿನ್ನೆಲೆಯಲ್ಲಿ ಪಕ್ಷದ ವತಿಯಿಂದ ಕಾರ್ಯಕ್ರಮ ನಡೆಸಿ ಯಾವುದೇ ರೀತಿಯ ಕಾನೂನು ಉಲ್ಲಂಘನೆಯಾಗಬಾರದು ಎಂದು ನೀತಿ-ಸಂಹಿತೆ ಜಾರಿಗೂ ಮುನ್ನವೇ ಜಾಹೀರಾತು ನೀಡಿದ್ದೆವು. ನಮ್ಮಲ್ಲೂ ಸಹ  ಸರ್ಕಾರದ ಅಭಿವೃದ್ಧಿ ಹಾಗೂ ಇನ್ನಿತರ ಜನಪರ ಯೋಜನೆಗಳ ಬಗ್ಗೆ ಹೇಳಿಕೊಳ್ಳಲು ಸಾಕಷ್ಟಿದೆ ಎಂದು ಹೇಳಿದರು.

ಆದರೆ, ನಮಗೊಂದು ಯಾಯ, ಅವರಿಗೊಂದು ನ್ಯಾಯ ಎನ್ನುವಂತಾಗಬಾರದು. ಬಿಜೆಪಿ ಬದುಕಿರುವುದೇ ಪ್ರಚಾರದಲ್ಲಿ. ಗಿಮಿಕ್ ಮಾಡುವುದರಲ್ಲಿ ಅವರು ಎತ್ತಿದ ಕೈ ಎಂದು ಟೀಕಿಸಿದರು. ಜಾತಿ ಜಗಣತಿ ಕಾರ್ಯ ಬೆಂಗಳೂರಿನಲ್ಲಿ ಇನ್ನೂ ಮುಗಿದಿಲ್ಲ. 27ಕ್ಕೆ ಮುಗಿಯಬೇಕಾಗಿದ್ದ ಗಣತಿ ಕಾರ್ಯ ಮೂರು ದಿನಗಳ ಕಾಲ ವಿಸ್ತರಣೆಯಾಗಿದೆ ಎಂದರು. ವೃತ್ತಿಪರ ಕೋರ್ಸ್‌ಗಳಲ್ಲಿ ಶುಲ್ಕ ಹೆಚ್ಚಳವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಡವರಿಗೆ ಹಾಗೂ ಮಧ್ಯಮ ವರ್ಗದವರಿಗೆ ಇವರಿಂದ ಸಾಕಷ್ಟು ತೊಂದರೆಯಾಗಿದೆ. ಈ ಶುಲ್ಕದ ಬಗ್ಗೆ ಪುನರ್ ಪರಿಶೀಲನೆ ಮಾಡುವಂತೆ ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಚಿವರಿಗೆ ಮನವಿ ಮಾಡುವುದಾಗಿ ತಿಳಿಸಿದರು. ಹಿಂದಿನ ಬಿಜೆಪಿ ಸರ್ಕಾರ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಕಾಲೇಜಿಗೆ ನೀಡಬೇಕಿದ್ದ 150 ಕೋಟಿ ಬಾಕಿ ಉಳಿಸಿಕೊಂಡಿತ್ತು. ಅದನ್ನು ನಮ್ಮ ಸರ್ಕಾರ ಪಾವತಿಸಿದೆ. ಜಿಲ್ಲೆಗೊಂದು ಎಂಜಿನಿಯರಿಂಗ್ ಕಾಲೇಜು ಆರಂಭಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ನಮಗೆ ಇಚ್ಛಾಶಕ್ತಿಯೂ ಇದೆ ಎಂದು ಅಭಿಪ್ರಾಯಪಟ್ಟರು.

75 ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆಯಡಿ ಮಾಸಿಕ 1500ರೂ.ಗಳಂತೆ 10 ತಿಂಗಳಿಗೆ 15 ಸಾವಿರ ರೂ.ಗಳನ್ನು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಕಾರ್ಯಕ್ರಮ ಏರ್ಪಡಿಸಿ ವಿತರಿಸಲಾಗುವುದು. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಪಿಯುಸಿ, ಮೆಡಿಕಲ್, ಎಂಜಿನಿಯರಿಂಗ್ ಸೇರಿದಂತೆ 2780 ಕೋರ್ಸ್‌ಗಳ ಶುಲ್ಕವನ್ನು ಸರ್ಕಾರ ಪಾವತಿಸುತ್ತದೆ. ಆ ವಿದ್ಯಾರ್ಥಿಗಳು ಶುಲ್ಕವಿಲ್ಲದೆ ವಿದ್ಯಾಭ್ಯಾಸ ಮಾಡಬಹುದು. ನಾವು ಪಾವತಿಸುವ ಶುಲ್ಕದಲ್ಲಿ ಬೋಧನಾ, ಪ್ರಯೋಗ ಶಾಲೆ, ಗ್ರಂಥಾಲಯ, ಪರೀಕ್ಷೆ, ಕ್ರೀಡೆ ಹೀಗೆ ಒಟ್ಟಾರೆ ಶುಲ್ಕ ಒಳಗೊಂಡಿರುತ್ತದೆ. ಈ ಶುಲ್ಕ 600 ರಿಂದ 40,000ರೂ. ವರೆಗೆ ಬರುತ್ತದೆ ಎಂದು ಮಾಹಿತಿ ನೀಡಿದರು.

Write A Comment