ಮುಂಬೈ : ಮನ್ ಕಿ ಬಾತ್ ಕಾರ್ಯಕ್ರಮದ ಪ್ರತಿ ಸಂಚಿಕೆಯಲ್ಲೂ ವಿವಿಧ ವಿಷಯಗಳ ಬಗ್ಗೆ ದೇಶದ ಜನತೆಯೊಂದಿಗೆ ಮಾತನಾಡುವ ಪ್ರಧಾನಿ ನರೇಂದ್ರ ಮೋದಿ, ರಾಮ ಮಂದಿರ ವಿಷಯದ ಬಗ್ಗೆ ಮಾತನಾಡಲಿ ಎಂದು ಶಿವಸೇನೆ ಹೇಳಿದೆ.
ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ ವಿನಯ್ ಕಟಿಯಾರ್ ನೀಡಿದ್ದ ಹೇಳಿಕೆಯನ್ನೇ ಮುಂದಿಟ್ಟುಕೊಂಡು ಸಂಪಾದಕೀಯ ಪ್ರಕಟಿಸಿರುವ ಶಿವಸೇನೆ ಮುಖವಾಣಿ ಸಾಮ್ನಾ, ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿನಯ್ ಕಟಿಯಾರ್ ನೀಡಿರುವ ಹೇಳಿಕೆ ಮುಂದೊಂದು ದಿನ ಸ್ಫೋಟಗೊಳ್ಳುವ ಬಾಂಬ್ ನ ಸೂಚನೆ ಎಂದು ಅಭಿಪ್ರಾಯಪಟ್ಟಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ರಾಮ ಮಂದಿರ ನಿರ್ಮಾಣ ವಿಷಯದಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿರುವ ಹಿಂದುತ್ವದ ಪ್ರತಿಪಾದಕರ ನಡುವೆ ಗೊಂದಲ ಉಂಟಾಗಿದೆ. ವಿನಯ್ ಕಟಿಯಾರ್ ಅವರ ಹೇಳಿಕೆ ಅಮಿತ್ ಶಾ ಅವರಿಗೆ ನೇರ ಸವಾಲೆಸೆದಂತಿದೆ ಎಂದು ಶಿವಸೇನೆ ಅಭಿಪ್ರಾಯಪಟ್ಟಿದೆ.
ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಪಕ್ಷ ತನ್ನ ಪ್ರಮುಖ ಸೈದ್ಧಾಂತಿಕ ವಿಷಯಗಳನ್ನು ಲೋಕಸಭೆಯ ಮುಂದಿಡಬೇಕಾದರೆ 370 ಸ್ಥಾನಗಳನ್ನು ಪಡೆಯಬೆಕಾದ ಅವಶ್ಯಕತೆ ಇದೆ ಎಂದು ಹೇಳಿದ್ದರು. ಈ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಶಿವಸೇನೆ, ಈ ಹಿಂದೆ ಚುನಾವಣೆ ಸಂದರ್ಭದಲ್ಲಿ ಮತಗಳಿಗಾಗಿ ಮುಸ್ಲಿಮರನ್ನು ಓಲೈಕೆ ಮಾಡುತ್ತಿದ್ದರು. ಆದರೆ ಈಗ ರಾಮ ಮಂದಿರ ವಿಷಯವನ್ನು ಮುಂದಿಟ್ಟುಕೊಂಡು ಹಿಂದುಗಳನ್ನು ಓಲೈಕೆ ಮಾಡಲಾಗುತ್ತಿದೆ ಎಂದು ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ರಾಮ ಮಂದಿರ ನಿರ್ಮಾಣದ ವಿಷಯವನ್ನು ಮಾತನಾಡಲು ಇದು ಸೂಕ್ತ ಸಮಯವಾಗಿದ್ದು, ಹಲವು ದಶಕಗಳಿಂದ ಇರುವ ವಿವಾದಾತ್ಮಕ ವಿಷಯದ ಬಗ್ಗೆ ಪ್ರಧಾನಿ ದೇಶದ ಜನತೆಯೊಂದಿಗೆ ಮಾತನಾಡಬೇಕಿದೆ ಎಂದು ಶಿವಸೇನೆ ಅಭಿಪ್ರಾಯಪಟ್ಟಿದೆ.
ವಿನಯ್ ಕಟಿಯಾರ್ ಹಿರಿಯ ಹಿಂದೂ ಮುಖಂಡ, ರಾಮ ಮಂದಿರ ನಿರ್ಮಾಣದ ಪರವಾಗಿ ಇಂದು ಕೇಳಿಬರುತ್ತಿರುವ ಧ್ವನಿ, ಮುಂದೊಂದು ದಿನ ಬಾಂಬ್ ಗಳಾಗಿ ಪರಿವರ್ತನೆಯಾಗಬಹುದೆಂದು ಶಿವಸೇನೆ ಎಚ್ಚರಿಕೆ ನೀಡಿದೆ.