ಬೆಂಗಳೂರು, ಜೂ.5-ವಿಧಾನಸೌಧ ಹಾಗೂ ವಿಕಾಸ ಸೌಧಗಳಿಗೆ ಆಧುನಿಕ ರೀತಿಯಲ್ಲಿ ಹೆಚ್ಚಿನ ಭದ್ರತೆಗೆ ಕೈಗಾರಿಕಾ ಭದ್ರತಾ ಪಡೆಯನ್ನು ನಿಯೋಜಿಸಲಾಗುತ್ತದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಇಂದಿಲ್ಲಿ ತಿಳಿಸಿದರು. ಗೃಹ ಸಚಿವ ಜಾರ್ಜ್ ಹಾಗೂ ಕಾನೂನು ಸಚಿವ ಟಿ.ಬಿ.ಜಯಚಂದ್ರ
ಅವರ ಜಂಟಿ ಸುದ್ದಿಗೋಷ್ಠಿ ವೇಳೆ ಮಾತನಾಡಿದ ಅವರು, ವಿಧಾನಸೌಧ ಹಾಗೂ ವಿಕಾಸ ಸೌಧಗಳಿಗೆ ಹೆಚ್ಚಿನ ಭದ್ರತೆ ಒದಗಿಸಲು ಸಿಸಿ ಟಿವಿ, ವೆಹಿಕಲ್ ಸ್ಕ್ಯಾನರ್ ಸೇರಿದಂತೆ ಇನ್ನಿತರ ಆಧುನಿಕ ಭದ್ರತಾ ವ್ಯವಸ್ಥೆ ಯನ್ನು ಅಳವಡಿಸಿಕೊಳ್ಳಲಾಗುತ್ತಿದೆ ಎಂದರು.
ಮೊದಲು ವಿಕಾಸಸೌಧ ಹಾಗೂ ವಿಧಾನಸೌಧಗಳಲ್ಲಿ ಈ ವ್ಯವಸ್ಥೆ ಅಳವಡಿಸಿ ನಂತರ ಸುವರ್ಣ ವಿಧಾನಸೌಧದಲ್ಲೂ ಈ ವ್ಯವಸ್ಥೆ ಅಳವಡಿಸಲಾಗುವುದು. ಇದಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು. ಜೀವಭಯ ಇರುವ ಗಣನೀಯರಿಗೆ ಗನ್ಮ್ಯಾನ್ ನೀಡಲಾಗುತ್ತದೆ. ಗನ್ಮ್ಯಾನ್ ಬೇಕೆಂದು ಕೇಳುವವರಿಗೂ ಗನ್ಮ್ಯಾನ್ ವ್ಯವಸ್ಥೆ ಮಾಡಲಾಗುವುದು. ಆದರೆ ವೆಚ್ಚವನ್ನು ಅವರೇ ಭರಿಸಬೇಕು ಎಂದು ತಿಳಿಸಿದರು. ಭೂ ಒತ್ತುವರಿ ಸಂಬಂಧ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕಿದೆ. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಗೆ ಪತ್ರ ಬರೆಯಲಾಗುತ್ತಿದೆ. ಕಾವೇರಿ ನದಿ ನೀರು ಕಲುಷಿತದ ಬಗ್ಗೆ ನಮಗೆ ಇದುವರೆಗೂ ಯಾವುದೇ ನೋಟಿಸ್ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಕೆಲವೊಂದು ಪ್ರಕರಣಗಳನ್ನು ಹಿಂದಕ್ಕೆ ಪಡೆದಿರುವುದಕ್ಕೆ ಬಿಜೆಪಿ ವಿರೋಧಿಸುತ್ತಿದೆ. ಆದರೆ ಅವರ ಆಡಳಿತಾವಧಿಯಲ್ಲಿ 410 ಪ್ರಕರಣಗಳನ್ನು ಹಿಂಪಡೆದಿದ್ದು, ಅದರಲ್ಲಿ 58 ಕೋಮುಗಲಭೆ, 154 ರೈತರಿಗೆ ಸಂಬಂಧಿಸಿದ್ದು, ಇತರೆ 209 ಪ್ರಕರಣಗಳನ್ನು ಹಿಂಪಡೆದಿದ್ದವು. ನಾವು ಎರಡು ವರ್ಷಗಳಲ್ಲಿ ಕೇವಲ 29 ಪ್ರಕರಣಗಳನ್ನು ಹಿಂಪಡೆದಿದ್ದು,ಕೋಮುಗಲಭೆಗೆ ಸಂಬಂಧಿಸಿದ್ದು 10 ಪ್ರಕರಣ, ಇತರೆ 19 ಪ್ರಕರಣ ಎಂದು ವಿವರಿಸಿದರು. ಗೃಹ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಆದ್ಯತೆ ಮೇರೆಗೆ ಜಿಲ್ಲಾ ಕೇಂದ್ರಗಳಲ್ಲಿ ಮಹಿಳಾ ಪೊಲೀಸ್ ಠಾಣೆಗಳನ್ನು ಆರಂಭಿಸುವುದಾಗಿ ತಿಳಿಸಿದರು. ಬಿಜೆಪಿ ರಾಜ್ಯಾಧ್ಯಕ್ಷರು ಗೌರವದಿಂದ ಮಾತನಾಡಬೇಕು. ಅಯೋಗ್ಯರು ಎಂದು ಹೇಳುವುದು ಸರಿಯಲ್ಲ. ಅವರ ಆಡಳಿತಾವಧಿಯಲ್ಲಿ ಮುಖ್ಯಮಂತ್ರಿಯೇ ಜೈಲು ಪಾಲಾಗಿದ್ದರು. ರೇಪ್ ಕೇಸ್ ಮತ್ತಿತರ ಕೇಸ್ಗಳಲ್ಲೇ ಕೆಲವರು ಮುಳುಗಿಹೋಗಿದ್ದರು ಎಂದು ಟೀಕಿಸಿದರು.