ಹೊಸದಿಲ್ಲಿ: ಕಳೆದ 33 ವರ್ಷಗಳಲ್ಲೇ ಸೇನೆಯ ಮೇಲೆ ನಡೆದ ಅತಿ ಭೀಕರ ದಾಳಿಗೆ ತಿರುಗೇಟು ನೀಡಲು ನಿರ್ಧರಿಸಿರುವ ಕೇಂದ್ರ ಸರಕಾರ ನಾಗಾ ಬಂಡುಕೋರರ ದಮನಕ್ಕೆ ಸೇನೆ ರವಾನಿಸಲು ಚಿಂತಿಸುತ್ತಿದೆ.
ಮಣಿಪುರದ ಚಾಂದೇಲ್ ಜಿಲ್ಲೆಯಲ್ಲಿ ಬಂಡುಕೋರರು ಗುರುವಾರ ನಡೆಸಿದ ದಾಳಿಗೆ 20 ಯೋಧರು ಬಲಿಯಾಗಿದ್ದರಲ್ಲದೆ, 12 ಮಂದಿ ತೀವ್ರವಾಗಿ ಗಾಯಗೊಂಡಿದ್ದರು. ಇದರಿಂದ ಕ್ರುದ್ಧವಾಗಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೆಂದ್ರ ಸರಕಾರ ಎನ್‌ಎಸ್‌ಸಿಎನ್(ಕೆ) ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಹಿಂಸೆಗೆ ಕಾರಣವಾಗುತ್ತಿರುವ ಎಲ್ಲ ಉಗ್ರ ಸಂಘಟನೆಗಳನ್ನು ನಿಗ್ರಹಿಸಲು ನಿರ್ಧರಿಸಿದೆ.
ಗುರುವಾರ ನಡೆದ ರಕ್ತಪಾತಕ್ಕೆ ಕಾರಣರಾಗಿರುವುದಾಗಿ ಒಪ್ಪಿಕೊಂಡಿರುವ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಳೆದ ಕೆಲ ವಾರಗಳಿಂದ ಹಿಂಸಾಚಾರ ನಡೆಸುತ್ತಿರುವ ಗುಂಪುಗಳನ್ನು ದಮನಿಸುವ ನಿರ್ಧಾರವದು. ಎನ್‌ಎಸ್‌ಸಿಎನ್(ಕೆ) ಜತೆಗಿನ ಕದನ ವಿರಾಮ ಒಪ್ಪಂದ ಕಳೆದ ಮಾರ್ಚ್‌ನಲ್ಲಿ ಮುಕ್ತಾಯಗೊಂಡಿದೆ.
ದಾಳಿ ಘಟನೆ ತಿಳಿದ ಕೆಲವೇ ನಿಮಿಷಗಳಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಸೇನಾ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಸುಹಾಗ್ ಮತ್ತು ಇತರ ಹಿರಿಯ ಅಧಿಕಾರಿಗಳು ಘಟನೆಗೆ ಸರಕಾರ ನೀಡಬೇಕಾದ ಪ್ರತಿಕ್ರಿಯೆ ಬಗ್ಗೆ ಗುರುವಾರ ಚರ್ಚೆ ನಡೆಸಿದ್ದರು.
ದೇಶದ ಭದ್ರತೆ ಬಗ್ಗೆ ಕಠಿಣ ನಿಲುವು ಪ್ರಕಟಿಸಿರುವ ಎನ್‌ಡಿಎ ಆಡಳಿತದ ಅವಧಿಯಲ್ಲಿ ಭದ್ರತಾ ಪಡೆಗಳು ಮೇಲೆ ನಡೆದಿರುವ ಅತಿ ಕೆಟ್ಟ ದಾಳಿ ಇದಾಗಿದೆ.
ಬೋಡೋಲ್ಯಾಂಡ್ ರಾಷ್ಟ್ರೀಯ ಪ್ರಜಾಸತ್ತಾತ್ಮಕ ರಂಗ(ಎನ್‌ಡಿಎಫ್‌ಬಿ) ವಿರುದ್ಧ ಕೇಂದ್ರ ಸರಕಾರ ಅಳವಡಿಸಿರುವ ಆಕ್ರಮಣಶೀಲ ಧೋರಣೆಯನ್ನೇ ಇಲ್ಲೂ ಅನುಸರಿಸಲಾಗುವುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಭದ್ರತಾ ಪಡೆಗಳು ಎನ್‌ಡಿಎಫ್‌ಬಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿ ಯಶಸ್ಸು ಕಾಣುತ್ತಿರುವುದರಿಂಧ ಆ ಸಂಘಟನೆಯ ಚಟುವಟಿಕೆಗಳು ಕೆಳ ತಿಂಗಳುಗಳಿಂದ ಕಡಿಮೆಯಾಗಿವೆ.
ಏನಾಗಿತ್ತು?
ಇಂಫಾಲದಿಂದ 110 ಕಿ.ಮೀ ದೂರದ ಮೌಲ್‌ತಕ್ ಗ್ರಾಮದಲ್ಲಿ ದೋಗ್ರ ರೆಜಿಮೆಂಟ್ ತಂಡವೊಂದು ಎಂದಿನಂತೆ ರಸ್ತೆಯಲ್ಲಿ ನೆಲ ಬಾಂಬ್ ಹುದುಗಿಸಿಡಲಾಗಿದೆಯೇ ಎಂದು ಗುರುವಾರ ತಪಾಸಣೆ ನಡೆಸುತ್ತಿತ್ತು. ಆಗ ಸುಧಾರಿತ ಸ್ಫೋಟವೊಂದು ಸಿಡಿದಿತ್ತು. ಇದರ ಬೆನ್ನಿಗೇ ಗ್ರೆನೇಡ್‌ಗಳು ಹಾರಿ ಬಂದವು. ನಿರಂತರ ಗುಂಡಿನ ದಾಳಿಯೂ ನಡೆದಿತ್ತು. 20 ಮಂದಿ ಯೋಧರು ಸ್ಥಳದಲ್ಲೇ ಸಾವನ್ನಪ್ಪಿದರು. ಗುಂಡಿನ ಚಕಮಕಿಯಲ್ಲಿ ಒಬ್ಬ ಬಂಡುಕೋರ ಸತ್ತಿದ್ದಾನೆ ಎಂದು ಸೇನಾ ವಕ್ತಾರರು ತಿಳಿಸಿದ್ದರು. ಗಾಯಗೊಂಡ 12 ಯೋಧರನ್ನು ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ನ್ಯಾಶನಲ್ ಸೋಶಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್ (ಎನ್‌ಎಸ್‌ಸಿಎನ್) ನೆರವಿನೊಂದಿಗೆ ಈ ದಾಳಿ ನಡೆಸಿದ್ದಾಗಿ ಉಲ್ಫಾ ಘೋಷಿಸಿತ್ತು.