ಟಚ್ ಸ್ಕ್ರೀನ್ ಬಳಕೆ ಇದೀಗ ಮಾಮೂಲಾಗಿ ಬಿಟ್ಟಿದೆ. ಅದರಲ್ಲಿಯೂ ಯುವ ಜನತೆ ಇದಕ್ಕೆ ಮಾರು ಹೋಗಿರುವುದಂತೂ ಸತ್ಯ. ಈ ನಡುವೆ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ಗೂಗಲ್ ಸಂಸ್ಥೆ ಇದೀಗ ಬಟ್ಟೆಗಳಲ್ಲೂ ಟಚ್ ಸ್ಕ್ರೀನ್ ತಂತ್ರಜ್ಞಾನ ಅಳವಡಿಸಲು ಯೋಜನೆ ರೂಪಿಸಿದ್ದು ಅಚ್ಚರಿಗೆ ಕಾರಣವಾಗಿದೆ.
ವಾಹಕ ನೂಲುಗಳನ್ನು ತಯಾರಿಸಿ ಹೆಣೆಯುವ ಮೂಲಕ ಈ ಬಟ್ಟೆಗಳು ಟಚ್ ಸ್ಕ್ರೀನ್ ಮೆರಗು ಪಡೆಯಲಿದ್ದು ಇದಕ್ಕಾಗಿಯೇ ಗೂಗಲ್ ತನ್ನ ಆಧುನಿಕ ತಂತ್ರಜ್ಞಾನ ಮತ್ತು ಯೋಜನೆಯ ಪ್ರಯೋಗಾಲಯದಲ್ಲಿ ‘ಸ್ಮಾರ್ಟ್’ ನೂಲನ್ನು ತಯಾರಿಸುತ್ತಿದ್ದು ಮುಂದಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿಯೂ ಹೊಸ ಆವಿಷ್ಕಾರ ಮಾಡಲು ನಾಂದಿ ಹಾಡಿದೆ.
ವಿಶೇಷವೆಂದರೆ ಈ ಬಟ್ಟೆ ಮಿಶ್ರಲೋಹಗಳ ಮೂಲಕ ಸ್ಪರ್ಶ ಸಂವೇದನಾ ನೂಲಿನಿಂದ ತಯಾರಾಗಲಿದ್ದು ಕಾಟನ್ ಅಥವಾ ರೇಷ್ಮೆಯ ನೂಲಿನೊಂದಿಗೆ ಇದನ್ನೂ ಸಹ ಸೇರಿಸಲಾಗುತ್ತದೆ ಎಂದು ಗೂಗಲ್ ತನ್ನಈ ಹೊಸ ಯೋಜನೆಯ ಕುರಿತಾದ ವೆಬ್ ಸೈಟ್ ನಲ್ಲಿ ತಿಳಿಸಿದೆ. ಅಲ್ಲದೇ ಸಂವಾದಾತ್ಮಕ ಸರ್ಫೇಸ್ ಗಳನ್ನು ನಿರ್ಮಿಸಲು ಸೆನ್ಸರ್ ಗ್ರಿಡ್ ಗಳೂ ಅಳವಡಿಕೆಯಾಗಲಿದ್ದು, ಸ್ಪರ್ಶ ಸಂವೇದನಾ ನೂಲನ್ನು ಸಣ್ಣ ಸರ್ಕ್ಯೂಟ್ ನೊಂದಿಗೆ ಜೋಡಿಸಲು ನವೀನ ತಂತ್ರಜ್ಞಾನವನ್ನೂ ಸಹ ಬಳಸಲಾಗುತ್ತದೆಯಂತೆ.
ಅಷ್ಟೇ ಅಲ್ಲ, ಈ ಸರ್ಕ್ಯೂಟ್ ಗಳು ಒಂದು ಜಾಕೆಟ್ ನ ಗುಂಡಿಯಷ್ಟೇ ಗಾತ್ರ ಹೊಂದಿರಲಿದ್ದು ಸ್ಪರ್ಷ ಸಂವೇದಿ ನೂಲು ಗೆಸ್ಚರ್ ಡೇಟಾ ವನ್ನು ಮೊಬೈಲ್ ಗೆ ರವಾನೆ ಮಾಡಲಿದ್ದು, ಬಳಕೆದಾರರಿಗೆ ಆನ್ ಲೈನ್, ಆಪ್ ಸೇವೆಗಳ ಸಂಪರ್ಕವನ್ನೂ ಕಲ್ಪಿಸಲಿದೆ ಎಂದು ಗೂಗಲ್ ತಿಳಿಸಿದೆ.