ಕನ್ನಡ ವಾರ್ತೆಗಳು

ವಿವಿಧೆಡೆ ಕಳ್ಳತನ ನಡೆಸುತ್ತಿದ್ದ ಕುಖ್ಯಾತರ ತಂಡ ಸಿಸಿಬಿ ಪೊಲೀಸರ ಬಲೆಗೆ

Pinterest LinkedIn Tumblr

CCB_Arest_Thieves_1

ಮಂಗಳೂರು: ಜಿಲ್ಲೆಯ ವಿವಿಧೆಡೆ ಸರಣಿಕಳ್ಳತನದಲ್ಲಿ ತೊಡಗಿದ್ದ ಕುಖ್ಯಾತರ ತಂಡವನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಪೆರ್ಮನ್ನೂರು ರೈಸ್‍ಮಿಲ್ ಬಳಿಯ ಚೆಂಬುಗುಡ್ಡೆ ಬಿ ಕೆ. ಕಾಟೇಜ್ ನಿವಾಸಿ ಹಬೀಬ್ ಹಸನ್ (35), ಸುರತ್ಕಲ್ ಕೃಷ್ಣಾಪುರ ಚೊಕ್ಕಬೆಟ್ಟುವಿನ ಮೊಹಮ್ಮದ್ ಶಾಫಿ (41), ಮೊಹಮ್ಮದ್ ಅಜರುದ್ದೀನ್ (23), ಸುರತ್ಕಲ್‌‌ನ ಮೊಹಮ್ಮದ್ ನವಾಸ್ (21) ಹಾಗೂ ಹೊಸಬೆಟ್ಟುವಿನ ವಿಜಯ್ (25) ಎಂದು ಗುರುತಿಸಲಾಗಿದೆ.

ಆರೋಪಿಗಳು ಇತ್ತೀಚಿಗೆ ಜಿಲ್ಲೆಯಲ್ಲಿ ನಡೆದಂತಹ ಮಹಿಳೆಯರ ಸರಗಳ್ಳತನ, ಅಡಿಕೆ ಕಳವು ಹಾಗೂ ಜಾನುವಾರುಗಳ ಕಳ್ಳತನದ ಪ್ರಮುಖ ಆರೋಪಿಗಳು ಎನ್ನಲಾಗಿದೆ. ನಗರದ ಚೆಂಬುಗುಡ್ಡೆಯ ಬಳಿ ಫೋರ್ಡ್ ಐಕಾನ್ ಕಾರಿನಲ್ಲಿ ಅಡಿಕೆ ಚೀಲಗಳನ್ನು ಕಳವು ಮಾಡಿಕೊಂಡು ಮಾರಾಟಕ್ಕಾಗಿ ಸಾಗಿಸುತ್ತಿರುವಾಗ ಪೊಲೀಸರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

CCB_Arest_Thieves_2

ಆರೋಪಿಗಳು ಕಿನ್ಯಾ ಕನಕಮಜಲು ಎಂಬಲ್ಲಿನ ಮೊಹಮ್ಮದ್ ಮುನೀರ್ ಎಂಬುವರ ಅಂಗಡಿಯಲ್ಲಿಟ್ಟಿದ್ದ ಅಡಿಕೆಯನ್ನು, ಪರ್ತಿಪಾಡಿ, ಪನೇಲ್ ಬಾಕಿಮಾರ್, ಮುಡಿಪು ಬಳಿಯಲ್ಲಿ ಒಟ್ಟು ಮೂರು ಕಡೆ ರಾತ್ರಿ ವೇಳೆ ಗೋಡೌನ್‍ನ ಬಾಗಿಲಿನ ಬೀಗ ಮುರಿದು ಅಡಿಕೆ ಕಳವು ಮಾಡಿದ್ದಾರೆ.

ಬೆಳ್ತಂಗಡಿ ಠಾಣಾ ವ್ಯಾಪ್ತಿಯ ಜಾರಿಗೆಬೈಲು, ವಿಟ್ಲ ಠಾಣಾ ವ್ಯಾಪಿಯ ಕುಕ್ಕಾಜೆ, ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಬಡ್ಡಕಟ್ಟೆ ಮೊದಲಾದ ಕಡೆಗಳಲ್ಲಿ ಒಟ್ಟು ಸುಮಾರು 25 ಕ್ವಿಂಟಾಲ್ ಅಡಿಕೆ ಕಳವು ಮಾಡಿ ಮಾರಾಟ ಮಾಡಿದ್ದಾರೆ.

ಬಂಧಿತರಿಂದ ಒಂದು ಫೋರ್ಡ್ ಐಕಾನ್ ಕಾರು, 1650 ಕೆಜಿ ಅಡಿಕೆ ಹಾಗೂ 5 ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ. 9,75,000 ಎಂದು ಅಂದಾಜಿಸಲಾಗಿದೆ.

ಮಂಗಳೂರು ಪೊಲೀಸ್ ಆಯುಕ್ತ ಎಸ್. ಮುರುಗನ್ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಕೆ.ಎಂ. ಶಾಂತರಾಜು, ಅಪರಾಧ ವಿಭಾಗದ ಡಿಸಿಪಿ ವಿಷ್ಣುವರ್ಧನ. ಎನ್. ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಇನ್ಸ್‌‌ಪೆಕ್ಟರ್ ವೆಲೆಂಟೈನ್ ಡಿಸೋಜ, ಪಿಎಸ್ಐ ಶ್ಯಾಮ್‍ಸುಂದರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Write A Comment