ಮಂಗಳೂರು : ನಗರದ ವಿವಿಧ ಶಾಲೆಗಳ ಆರ್ಥಿಕವಾಗಿ ತೀರಾ ಹಿಂದುಳಿದ ಒಟ್ಟು 15 ಬಡ ಮಕ್ಕಳನ್ನು ಬಂಟ್ವಾಳದ ಮಡಿಲು ಚಾರಿಟೇಬಲ್ ಟ್ರಸ್ಟ್ ಶೈಕ್ಷಣಿಕವಾಗಿ ದತ್ತು ಸ್ವೀಕರಿಸಿತು.
ಶುಕ್ರವಾರ ನಗರದ ಬಲ್ಮಠ ಸರಕಾರೀ ಮಹಿಳಾ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಲ್ಮಠ ಸರಕಾರೀ ಪ್ರಾಥಮಿಕ ಶಾಲೆಯ 10 ಮಂದಿ ಹಾಗು ಕೊಟ್ಟಾರದ ಸಂತ ಪೀಟರ ಪ್ರಾಥಮಿಕ ಶಾಲೆಯ 5 ಮಂದಿ ಸೇರಿ ಒಟ್ಟು 15 ಮಂದಿ ಬಡ ವಿದ್ಯಾರ್ಥಿಗಳನ್ನು ಪ್ರಸಕ್ತ ಶೈಕ್ಷಣಿಕ ಸಾಲಿಗೆ ಅನ್ವಯವಾಗುವಂತೆ ದತ್ತು ಸ್ವೀಕರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಲ್ಮಠ ಸರಕಾರೀ ಮಹಿಳಾ ಶಿಕ್ಷಣ ತರಬೇತಿ ಸಂಸ್ಥೆಯ ಪ್ರಾಂಶುಪಾಲೆ ಶ್ರೀಮತಿ ಉಷಾ ಎನ್ ಅವರು ಮಾತನಾಡಿ, ‘ಮಡಿಲು ಅನ್ನುವ ಹೆಸರು ಕೇಳಿದಾಕ್ಷಣ ನೆನಪಿಗೆ ಬರುವುದು ಅಮ್ಮನ ಮಡಿಲು. ಮಡಿಲು ಅನ್ನುವ ಆ ಸುಂದರ ಹೆಸರೇ ನಮ್ಮಲ್ಲಿ ಸುರಕ್ಷಿತ ಭಾವವನ್ನು ಮೂಡಿಸುತ್ತದೆ. ಅಂತಹುದೇ ಸುರಕ್ಷಿತ ಭಾವವನ್ನು ಸಮಾಜದಲ್ಲಿರುವ ಅಸಹಾಯಕರಲ್ಲಿ , ಬಡಬಗ್ಗರಲ್ಲಿ ಮೂಡಿಸುವ ಕಾರ್ಯವನ್ನು ಮಡಿಲು ಚಾರಿಟೇಬಲ್ ಟ್ರಸ್ಟ್ ಅನ್ನುವ ಒಂದು ಸಂವೇದನಾಶೀಲ ಸಂಸ್ಥೆ ಮಾಡುತ್ತಿದೆ’ ಎಂದು ಶ್ಲಾಘಿಸಿದರು.
‘ತಾವಾಗಿಯೇ ಹುಡುಕಿಕೊಂಡು ಬಂದು ಸಹಾಯ ಮಾಡಿರುವುದು ಒಳ್ಳೆಯ ಬೆಳವಣಿಗೆ. ಇದು ನಮ್ಮ ಸಮಾಜ ಒಳ್ಳೆಯ ದಿಕ್ಕಿನಲ್ಲಿ ಸಾಗುತ್ತಿರುವುದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದ ಶ್ರೀಮತಿ ಉಷಾ ಎನ್ ಅವರು, ‘ಹಸಿದಾಗ ಅನ್ನ ನೀಡಬೇಕು ಎಂಬ ಮಾತಿನಂತೆ ಅಗತ್ಯ ಸಂದರ್ಭದಲ್ಲಿ ದಾನ ನೀಡಿದಂತಹ ಮಡಿಲು ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆದು ಮತ್ತಷ್ಟು ಸಮಾಜಮುಖಿ ಕಾರ್ಯಗಳಲ್ಲಿ ತೊಡಗುವಂತಾಗಲಿ’ ಎಂದು ಹಾರೈಸಿದರು.
ಈ ಸಂದರ್ಭ ದತ್ತು ಪಡೆದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಾಲಾ ಬ್ಯಾಗ್, ಛತ್ರಿ, ಶಾಲಾ ಸಮವಸ್ತ್ರ ಸೇರಿದಂತೆ ಶೈಕ್ಷಣಿಕ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಆದಿತ್ಯ ಟ್ರೇಡಿಂಗ್ ಸೊಲ್ಯುಶನ್ ಮಂಗಳೂರು ಶಾಖೆಯ ಪ್ರಬಂಧಕ ಭಾಸ್ಕರ್ ಕೆ, ಮಡಿಲು ಚಾರಿಟೇಬಲ್ ಟ್ರಸ್ಟ್ ನ ಕಾರ್ಯದರ್ಶಿ ಅಶ್ವಿನ್ ಅಮೀನ್ ಬಂಟ್ವಾಳ, ಅಕ್ಷಯಾ ರಾವ್, ಆತ್ಮಿಕ ಎಸ್ ಮುಂತಾದವರು ಉಪಸ್ಥಿತರಿದ್ದರು.
ಬಲ್ಮಠ ಸರಕಾರೀ ಪ್ರಾಥಮಿಕ ಶಾಲೆಯ ಉಸ್ತುವಾರಿ ಶಿಕ್ಷಕಿ ಡೊರೀನಾ ಡಿಸೋಜ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕಿ ಸವಿತಾ ವಂದಿಸಿದರು.