ಕೊಯಮತ್ತೂರು: ಬಹು ರಾಷ್ಟ್ರೀಯ ಕಂಪನಿಗಳ ಗ್ರಹಚಾರ ನೆಟ್ಟಗಿದ್ದಂತೆ ಕಾಣುತ್ತಿಲ್ಲ. ಮ್ಯಾಗಿಯಲ್ಲಿ ವಿಷಕಾರಕ ಅಂಶಗಳು ಪತ್ತೆಯಾದ ಹಿನ್ನೆಲೆಯಲ್ಲಿ ನಿಷೇಧಕ್ಕೊಳಲ್ಪಟ್ಟಿರುವ ಮಧ್ಯೆ ನೆಸ್ಲೆಯ ಮತ್ತೊಂದು ಉತ್ಪನ್ನವಾದ ಸೆರೆಲ್ಯಾಕ್ ಬೇಬಿ ಫುಡ್ ನಲ್ಲಿ ಈಗ ಜೀವಂತ ಹುಳುಗಳು ಪತ್ತೆಯಾಗಿವೆ.
ಕೊಯಮತ್ತೂರಿನ ಐಟಿ ಉದ್ಯೋಗಿ ಶ್ರೀರಾಮ್ ಎಂಬವರು ತಮ್ಮ ಒಂದು ವರ್ಷದ ಮಗುವಿಗಾಗಿ ನೆಸ್ಲೆಯ ಉತ್ಪನ್ನವಾದ ಸೆರೆಲ್ಯಾಕ್ ಬೇಬಿ ಫುಡ್ ತೆಗೆದುಕೊಂಡು ಹೋಗಿದ್ದು, ಅವರ ಪತ್ನಿ ಅದನ್ನು ತೆರೆದು ಪರಿಶೀಲಿಸಿದ ವೇಳೆ ಕೆಂಪು ಬಣ್ಣದ ಹಲವಾರು ಜೀವಂತ ಸಣ್ಣ ಸಣ್ಣ ಹುಳುಗಳು ಅದರಲ್ಲಿ ಕಂಡು ಬಂದಿದೆ.
ಪ್ಯಾಕೇಟ್ ಪರಿಶೀಲಿಸಿದ ವೇಳೆ ಎಕ್ಸ್ ಪೈರಿ ಡೇಟ್ 2016 ಫೆಬ್ರವರಿ ಎಂದು ಮುದ್ರಿತವಾಗಿದ್ದು, ಶ್ರೀರಾಮ್ ಈಗ ಆಹಾರ ಸಂರಕ್ಷಣಾ ಘಟಕಕ್ಕೆ ಈ ಸಂಬಂಧ ದೂರು ನೀಡಿದ್ದಾರೆ. ಈ ಪ್ಯಾಕೇಟನ್ನು ಪಡೆದುಕೊಂಡಿರುವ ಅಧಿಕಾರಿಗಳು ಇದನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಉತ್ಪಾದನೆ ವೇಳೆ ಹುಳುಗಳ ಮೊಟ್ಟೆ ಸೇರಿಕೊಂಡಿರುವ ಪರಿಣಾಮ ಈಗ ಮೊಟ್ಟೆಯೊಡೆದು ಮರಿಗಳಾಗಿರಬಹುದೆಂದು ಶಂಕಿಸಿದ್ದಾರೆ.