ಪಾಟ್ನಾ: ರಾಷ್ಟ್ರೀಯ ಜನತಾ ದಳದ ಉಚ್ಚಾಟಿತ ಸಂಸದ ಪಪ್ಪು ಯಾದವ್, ಜೆಟ್ ಏರ್ವೇಸ್ ವಿಮಾನದ ಏರ್ ಹೋಸ್ಟೆಸ್ ಹಾಗೂ ಇತರೆ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸಿದ್ದು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪಾಟ್ನಾದಿಂದ ನವದೆಹಲಿಗೆ ಬರುತ್ತಿದ್ದ ಜೆಟ್ ಏರ್ವೇಸ್ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದ ಪಪ್ಪು ಯಾದವ್ ತಮಗೆ ನೀಡಲಾಗಿದ್ದ ಆಹಾರವನ್ನು ಸ್ವಲ್ಪ ತಿಂದ ಬಳಿಕ ಉಳಿದಿದ್ದನ್ನು ಪಕ್ಕದಲ್ಲಿಯೇ ಬಿಸಾಡಿದ್ದರೆಂದು ಹೇಳಲಾಗಿದೆ. ಏರ್ ಹೋಸ್ಟೆಸ್ ಈ ರೀತಿ ಮಾಡಬಾರದೆಂದು ನಯವಾಗಿ ಹೇಳುತ್ತಿದ್ದಂತೆಯೇ ಆಕೆ ವಿರುದ್ದ ಮುಗಿ ಬಿದ್ದ ಪಪ್ಪು ಯಾದವ್ ಏರು ಧ್ವನಿಯಲ್ಲಿ ವಾಗ್ವಾದ ನಡೆಸಿದರೆಂದು ಹೇಳಲಾಗಿದೆ.
ಆಕೆಯ ನೆರವಿಗೆ ಇತರೆ ಸಿಬ್ಬಂದಿ ಧಾವಿಸಿದ ವೇಳೆ ಅವರೊಂದಿಗೂ ಪಪ್ಪು ಯಾದವ್ ಮಾತಿನ ಚಕಮಕಿ ನಡೆಸಿದ್ದು, ವಿಮಾನದ ಪೈಲೆಟ್ ನವದೆಹಲಿ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ಈ ಕುರಿತು ಮಾಹಿತಿ ನೀಡಿದರೆನ್ನಲಾಗಿದೆ. ವಿಮಾನ ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆಯೇ ಪಪ್ಪು ಯಾದವ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಆದರೆ ಈ ಕುರಿತು ಅಧಿಕೃತ ದೂರು ದಾಖಲಾಗದ ಹಿನ್ನೆಲೆಯಲ್ಲಿ ಅವರನ್ನು ಬಿಟ್ಟು ಕಳುಹಿಸಲಾಗಿದ್ದು, ಈ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಪಪ್ಪು ಯಾದವ್, ಅಂತಹ ಯಾವುದೇ ಘಟನೆ ವಿಮಾನದಲ್ಲಿ ನಡೆದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.