ಕರ್ನಾಟಕ

ನಕಲಿ ಕೀ ಬಳಸಿ ಪರಿಚಿತರ ಮನೆಗಳಲ್ಲಿ ಕಳ್ಳತನ; ಇಬ್ಬರ ಬಂಧನ: ಅರ್ಧ ಕೆ.ಜಿ ಚಿನ್ನ ವಶ

Pinterest LinkedIn Tumblr

gold-handcuffs

ಬೆಂಗಳೂರು: ನಕಲಿ ಕೀ ಬಳಸಿ ಪರಿಚಿತರ ಮನೆಯಲ್ಲಿ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಬ್ಯಾಟರಾಯನಪುರ ಪೊಲೀಸರು, ಅರ್ಧ ಕೆ.ಜಿ ಚಿನ್ನಾಭರಣ ಹಾಗೂ ಎರಡು ಕೆ.ಜಿ ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

‘ಚಿಕ್ಕಲಸಂದ್ರದ ಪೃಥ್ವಿರಾಜ್ (22) ಹಾಗೂ ಇಟ್ಟುಮಡು ನಿವಾಸಿ ಸಂಜೀವ್ (19) ಎಂಬುವರನ್ನು ಬಂಧಿಸಲಾಗಿದೆ. ಆವಲಹಳ್ಳಿಯ ಸಂದೀಪ್ ಎಂಬುವರ ಮನೆಯಲ್ಲಿ ಜೂನ್‌ 10ರಂದು ಕಳ್ಳತನ ನಡೆದಿತ್ತು. ತನಿಖೆ ನಡೆಸಿದಾಗ ಸಂದೀಪ್‌ ಅವರ ಅಕ್ಕನ ಮಗ ಪೃಥ್ವಿರಾಜ್‌, ಗೆಳೆಯ ಸಂಜೀವ್‌ನ ಮೂಲಕ ಕಳವು ಮಾಡಿಸಿದ್ದ ಸಂಗತಿ ಗೊತ್ತಾಯಿತು’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.

ಬಿ.ಕಾಂ ಓದಿರುವ ಪೃಥ್ವಿರಾಜ್, ಇವೆಂಟ್ ಮ್ಯಾನೇಜ್‌ಮೆಂಟ್‌ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಾನೆ. ಆಗಾಗ್ಗೆ ಸಂದೀಪ್‌ ಅವರ ಮನೆಗೆ ಬಂದು ಹೋಗುತ್ತಿದ್ದ ಈತ, ಆಭರಣಗಳ ಮೇಲೆ ಕಣ್ಣಿಟ್ಟಿದ್ದ. ಇತ್ತೀಚೆಗೆ ಮನೆಯ ಕೀಯನ್ನು ನಕಲು ಮಾಡಿಸಿ, ಗೆಳೆಯನಿಗೆ ಕೊಟ್ಟಿದ್ದ.

ಜೂನ್‌ 10ರಂದು ಸಂದೀಪ್ ಅವರು ಪತ್ನಿ ಜತೆ ಮಾವಳ್ಳಿ ಜಾತ್ರೆಗೆ ತೆರಳಿದ್ದರು. ಈ ಬಗ್ಗೆ ಸಂಜೀವ್‌ಗೆ ಸಂದೇಶ ಕಳುಹಿಸಿದ್ದ ಪೃಥ್ವಿರಾಜ್, ತನ್ನ ಮೇಲೆ ಅನುಮಾನ ಬರಬಾರದೆಂದು ಸ್ವಲ್ಪ ಸಮಯದ ನಂತರ ಆತ ಕೂಡ ಜಾತ್ರೆಗೆ ತೆರಳಿ ಸಂದೀಪ್‌ ದಂಪತಿ ಜತೆ ಇದ್ದ.

ಪೃಥ್ವಿರಾಜ್ ಕೊಟ್ಟಿದ್ದ ನಕಲಿ ಕೀ ನೆರವಿನಿಂದ ಮನೆಗೆ ನುಗ್ಗಿದ್ದ ಸಂಜೀವ್, ₨ 9 ಲಕ್ಷ ಮೌಲ್ಯದ 365 ಗ್ರಾಂ ಚಿನ್ನಾಭರಣ ಹಾಗೂ ಎರಡು ಕೆ.ಜಿ ಬೆಳ್ಳಿ ವಸ್ತುಗಳನ್ನು ದೋಚಿದ್ದ. ಸಂದೀಪ್ ದಂಪತಿ ಸಂಜೆ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಈ ಬಗ್ಗೆ ದೂರು ಕೊಡಲು ಪೃಥ್ವಿರಾಜನೇ ಸಂದೀಪ್ ಅವರನ್ನು ಠಾಣೆಗೆ ಕರೆದುಕೊಂಡು ಬಂದಿದ್ದ ಎಂದು ಪೊಲೀಸರು ಹೇಳಿದರು.

ಮನೆಗೆ ಬಂದು ಹೋಗುವ ವ್ಯಕ್ತಿಗಳ ಬಗ್ಗೆ ಫಿರ್ಯಾದಿಯನ್ನು ವಿಚಾರಿಸಿದಾಗ ಅವರು ಪೃಥ್ವಿರಾಜ್ ಸೇರಿದಂತೆ ನಾಲ್ಕೈದು ಮಂದಿಯ ಹೆಸರು ಹೇಳಿದರು. ಅನುಮಾನದ ಮೇಲೆ ಪೃಥ್ವಿರಾಜ್‌ನ ಮೊಬೈಲ್ ಕರೆಗಳನ್ನು ಪರಿಶೀಲಿಸಿದಾಗ ಕಳವು ನಡೆದ ದಿನ ಆತ, ರೌಡಿ ಸಕಾಳಿ ಬಾಬುನ ಮಗ ಸಂಜೀವ್ ಜತೆ ಮಾತನಾಡಿದ್ದ ಸಂಗತಿ ತಿಳಿಯಿತು. ಹೀಗಾಗಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಆರೋಪಿ ತಪ್ಪೊಪ್ಪಿಕೊಂಡ. ನಂತರ ಸಂಜೀವ್‌ನನ್ನೂ ವಶಕ್ಕೆ ಪಡೆಯಲಾಯಿತು ಎಂದು ಮಾಹಿತಿ ನೀಡಿದರು.

ಹಿಂದೆಯೂ ಕದ್ದಿದ್ದರು
ಬನಶಂಕರಿ ಎರಡನೇ ಅಡ್ಡರಸ್ತೆಯಲ್ಲಿರುವ ತಮ್ಮ ಮನೆಯನ್ನು ಸಂಜೀವ್ ಪೋಷಕರು ಬಾಡಿಗೆ ಕೊಟ್ಟಿದ್ದಾರೆ. ಆರು ತಿಂಗಳ ಹಿಂದೆ ಸಂಜೀವ್‌, ಪೃಥ್ವಿರಾಜ್‌ ಜತೆ ಸೇರಿ ಆ ಮನೆಯಲ್ಲಿ ₨ 183 ಗ್ರಾಂ ಚಿನ್ನಾಭರಣ ಕದ್ದಿದ್ದ. ಈ ಪ್ರಕರಣ ಕೂಡ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

Write A Comment