ಬೆಂಗಳೂರು: ಆರ್ಪಿಸಿ ಲೇಔಟ್ನ ಫೈನಾನ್ಸ್ ಕಂಪೆನಿಯೊಂದಕ್ಕೆ ನುಗ್ಗಿದ ನಾಲ್ವರು ದುಷ್ಕರ್ಮಿಗಳು, ಭದ್ರತಾ ಸಿಬ್ಬಂದಿಯನ್ನು ಪಿಸ್ತೂಲಿನಿಂದ ಬೆದರಿಸಿ ದರೋಡೆ ಮಾಡಲು ಯತ್ನಿಸಿದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
ಆರ್ಪಿಸಿ ಲೇಔಟ್ನ ಕ್ಲಬ್ ರಸ್ತೆಯಲ್ಲಿ ‘ಇಂಡಿಯಾ ಇನ್ಫೋಲೈನ್ ಫೈನಾನ್ಸ್ ಲಿಮಿಟೆಡ್’ (ಐಐಎಫ್ಎಲ್) ಕಂಪೆನಿ ಇದೆ. ಮಧ್ಯಾಹ್ನ 12.30ರ ಸುಮಾರಿಗೆ ಗ್ರಾಹಕರ ಸೋಗಿನಲ್ಲಿ ಒಬ್ಬಾತ ಕಂಪೆನಿಗೆ ಹೋಗಿದ್ದಾನೆ. ಆತನ ಹಿಂದೆಯೇ ಮೂರು ಮಂದಿ ಹೆಲ್ಮೆಟ್ ಧರಿಸಿಕೊಂಡು ಒಳ ಹೋಗಲು ಮುಂದಾಗಿದ್ದಾರೆ.
ಅವರನ್ನು ತಡೆದ ಭದ್ರತಾ ಸಿಬ್ಬಂದಿ ನರಸಿಂಹಯ್ಯ, ಹೆಲ್ಮೆಟ್ ತೆಗೆದು ಹೋಗುವಂತೆ ತಿಳಿಸಿದ್ದಾರೆ. ಆಗ ಒಬ್ಬಾತ ರಿವಾಲ್ವರ್ ತೋರಿಸಿ, ಕಿರುಚಾಡದಂತೆ ನರಸಿಂಹಯ್ಯ ಅವರನ್ನು ಬೆದರಿಸಿದ್ದಾನೆ. ಈ ವೇಳೆ ಒಳನುಗ್ಗಿದ ಉಳಿದ ದರೋಡೆಕೋರರು, ಕಚೇರಿ ಸಿಬ್ಬಂದಿ ಹಾಗೂ ಗ್ರಾಹಕರನ್ನು ಕೊಠಡಿಯಲ್ಲಿ ಕೂಡಿದ್ದಾರೆ.
‘ಕಟ್ಟಡದ ಮೊದಲ ಮಹಡಿಯಲ್ಲಿ ಕಂಪೆನಿ ಇದ್ದು, ನೆಲ ಅಂತಸ್ತಿನಲ್ಲಿ ವಿಶ್ರಾಂತಿ ಕೊಠಡಿ ಹಾಗೂ ಶೌಚಾಲಯಗಳಿವೆ. ದುಷ್ಕರ್ಮಿಗಳು ಕಂಪೆನಿಗೆ ನುಗ್ಗಿದ್ದಾಗ ಅಲ್ಲಿನ ಸಿಬ್ಬಂದಿ ಸೌಮ್ಯ ಶೌಚಾಲಯಕ್ಕೆ ಹೋಗಿದ್ದರು. ಸ್ವಲ್ಪ ಸಮಯದ ನಂತರ ಅವರು ವಾಪಸ್ ಬಂದಿದ್ದಾರೆ. ಆಗ ಭದ್ರತಾ ಸಿಬ್ಬಂದಿಯ ಹಣೆಗೆ ಆಗುಂತಕನೊಬ್ಬ ಪಿಸ್ತೂಲು ಹಿಡಿದು ನಿಂತಿರುವುದನ್ನು ಕಂಡು ಚೀರಿಕೊಂಡಿದ್ದಾರೆ. ಇದರಿಂದ ಭೀತಿಗೆ ಒಳಗಾದ ದುಷ್ಕರ್ಮಿಗಳು, ಬೈಕ್ಗಳಲ್ಲಿ ಪರಾರಿಯಾಗಿದ್ದಾರೆ’ ಎಂದು ಹಿರಿಯ ಅಧಿಕಾರಿಗಳು ವಿವರಿಸಿದರು. ವಿಜಯನಗರ ಠಾಣೆಯಲ್ಲಿ ಪ್ರರಕಣ ದಾಖಲಾಗಿದೆ.