ಮಂಗಳೂರು : ಕಳೆದ ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ನಗರದ ಹಲವೆಡೆಗಳಲ್ಲಿ ವ್ಯಾಪಕ ಮಳೆಹಾನಿಯುಂಟಾಗಿದೆ. ಹಲವೆಡೆ ಮರಗಳು ಧರೆಗುರುಳಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮಾತ್ರವಲ್ಲದೇ ವಿದ್ಯುತ್ ಕಂಬಗಳು ರಸ್ತೆಗುರುಳಿ ಬಿದ್ದ ಪರಿಣಾಮ ಕೆಲವೆಡೆ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಮಣ್ಣಗುಡ್ಡ ಸಮೀಪದ ಗುಂಡುರಾವ್ ಲೇನ್‌ನ ಡಿ.ವಿ.ಟಿ ಕಂಪೌಂಡ್‌ನ ಮನೆಯೊಂದರ ಮೇಲೆ ದೊಡ್ಡ ಗಾತ್ರದ ಮರವೊಂದು ಬಿದ್ದ ಪರಿಣಾಮ ಮನೆಯ ಛಾವಣಿಗೆ ಸಂಪೂರ್ಣ ಹಾನಿಯಾಗಿದ್ದು, ಅಪಾರ ನಷ್ಟ ಉಂಟಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ, ಛಾವಣಿಯ ಮೇಲೆ ಬಿದ್ದ ಮರವನ್ನು ತೆರವುಗೊಳಿಸಿದ್ದಾರೆ.
ನಗರದ ಪಾಂಡೇಶ್ವರ ಸಮೀಪದ ಓಲ್ಡ್ ಕೆಂಟ್ ರಸ್ತೆಯ ಮೇಲೆ ವಿದ್ಯುತ್ ಕಂಬವೊಂದು ಧರಾಶಾಯಿಯಾದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಇದೇ ರಸ್ತೆಯಲ್ಲಿ ಮತ್ತೊಂದು ಕಡೆ ವಿದ್ಯುತ್ ಕಂಬವೊಂದು ಅರ್ಧಕ್ಕೆ ಮುರಿದು ಬಿದ್ದಿದ್ದು, ಸ್ಥಳಿಯರಲ್ಲಿ ಆತಂಕ ಸೃಷ್ಠಿಸಿದೆ. ಇದೇ ಸಂದರ್ಭದಲ್ಲಿ ಮೆಸ್ಕಾಂ ಇಲಾಖೆಯು ದುರಸ್ತಿ ಕಾರ್ಯ ಕೈಗೊಂಡಿರುವುದರಿಂದ ಪರಿಸರದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.