ಕರ್ನಾಟಕ

ಬನಶಂಕರಿ ದೇವಾಲಯದಲ್ಲಿ ಚಿನ್ನಾಭರಣ ಕಳವು ಪ್ರಕರಣದ ಹಿಂದೇನಿದೆ…?

Pinterest LinkedIn Tumblr

gold

ಬೆಂಗಳೂರು: ನಗರದ ಐತಿಹಾಸಿಕ ಬನಶಂಕರಿ ದೇವಾಲಯದಲ್ಲಿ ದೇವಿಯ ಚಿನ್ನದ ಪಾದುಕೆ ಹಾಗೂ ಕಿರೀಟದ ಸ್ವಲ್ಪ ಭಾಗವನ್ನು ಕತ್ತರಿಸಿ ಕಳವು ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ನಾಲ್ವರು ಅರ್ಚಕರನ್ನು ಹೊರತುಪಡಿಸಿ ಗರ್ಭಗುಡಿಗೆ ಯಾರೂ ಹೋಗುವುದಿಲ್ಲ. ಹೀಗಾಗಿ ದೇವಾಲಯದ ಆಡಳಿತ ಮಂಡಳಿಯು ಅರ್ಚಕರ ಮೇಲೆ ಅನುಮಾನ ವ್ಯಕ್ತಪಡಿಸಿದೆ. ಪ್ರಕರಣ ಈಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಮುಜರಾಯಿ ಇಲಾಖೆಯು ಆ ನಾಲ್ವರನ್ನು ಅಮಾನತುಗೊಳಿಸಿದೆ. ‘ಜೂನ್‌ 10ರಂದು ದೇವಿಗೆ ಪೂಜೆ ಸಲ್ಲಿಸುತ್ತಿದ್ದಾಗ ಪಾದುಕೆ ಮತ್ತು ಕಿರೀಟದ ಬಳಿ ಕೈಗೆ ಚುಚ್ಚಿದಂತಾಯಿತು. ಆ ಜಾಗವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಚಿನ್ನ ಕತ್ತರಿಸಿರುವುದು ಗೊತ್ತಾಯಿತು. ಈ ವಿಷಯವನ್ನು ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದೆ’ ಎಂದು ಅರ್ಚಕ ನಾಗರಾಜ ಶಾಸ್ತ್ರಿ ಹೇಳಿದ್ದಾರೆ.

‘ಒಟ್ಟು 6.8 ಗ್ರಾಂ ಚಿನ್ನ ಕಳವಾಗಿದೆ. ಪ್ರಧಾನ ಅರ್ಚಕ ಸತ್ಯನಾರಾಯಣ ಶಾಸ್ತ್ರಿ, ಅರ್ಚಕ ನಾಗರಾಜ್ ರಾವ್, ಪರಿಚಾರಕ ಸೋಮಶೇಖರ್ ಶರ್ಮಾ ಹಾಗೂ ಸಹಾಯಕ ಅರ್ಚಕ ಸತೀಶ್ ಮಾತ್ರ ಗರ್ಭಗುಡಿ ಪ್ರವೇಶಿಸುತ್ತಾರೆ. ಈ ಕಾರಣದಿಂದ ನಾಲ್ಕೂ ಮಂದಿಯನ್ನು ವಿಚಾರಣೆ ನಡೆಸಲಾಯಿತು. ಆದರೆ, ಸ್ಪಷ್ಟ ಮಾಹಿತಿ ಸಿಗದ ಕಾರಣ ಜೂನ್ 18ರಂದು ಮುಜರಾಯಿ ಇಲಾಖೆಗೆ ಪತ್ರ ಬರೆಯಲಾಯಿತು’ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿ ತಿಳಿಸಿದರು.

‘ದೇವಾಲಯದಲ್ಲಿ ಒಟ್ಟು 28 ಸಿ.ಸಿ ಟಿ.ವಿ ಕ್ಯಾಮೆರಾಗಳಿದ್ದು, ಹೊರಗಿನವರು ಕೃತ್ಯ ಎಸಗಿರುವ ಬಗ್ಗೆ ಯಾವುದೇ ಕುರುಹು ಇಲ್ಲ. ದೇವಿಗೆ ಅಲಂಕಾರ ಮಾಡುವಾಗ ಪರದೆ ಎಳೆಯಲಾಗುತ್ತದೆ. ಹೀಗಾಗಿ ಯಾವ ಸಂದರ್ಭದಲ್ಲಿ ಕೃತ್ಯ ನಡೆದಿದೆ ಎಂಬುದೂ ತಿಳಿಯುತ್ತಿಲ್ಲ. ಘಟನೆ ಸಂಬಂಧ ಕುಮಾರಸ್ವಾಮಿ ಲೇಔಟ್ ಠಾಣೆಗೆ ದೂರು ಸಲ್ಲಿಸಲಾಗಿದೆ’ ಎಂದರು.

ಶುಕ್ರವಾರ ಬೆಳಿಗ್ಗೆ ದೇವಾಲಯಕ್ಕೆ ಭೇಟಿ ನೀಡಿದ ಮುಜರಾಯಿ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ವಿ. ಶಂಕರ್, ಸ್ಥಳ ಪರಿಶೀಲಿಸಿ ಆ ಅರ್ಚಕರನ್ನು ವಿಚಾರಣೆ ನಡೆಸಿದರು.

13 ನಿಮಿಷದಲ್ಲಿ ಕಳವು: ‘ಜೂನ್ 10ರ ಬೆಳಿಗ್ಗೆ ಆರು ಗಂಟೆಗೆ ದೇವಾಲಯದ ಬಾಗಿಲು ತೆರೆದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ನಾಗರಾಜ್ ಹೇಳಿದ್ದಾರೆ. ಆದರೆ, ಮೊದಲು ಗರ್ಭಗುಡಿಗೆ ಹೋದ ಅವರು, 13 ನಿಮಿಷಗಳ ಕಾಲ ಪರದೆ ಎಳೆದುಕೊಂಡು ಏನು ಮಾಡಿದರು ಎಂಬುದರ ಬಗ್ಗೆ ತನಿಖೆ ನಡೆಸಿದರೆ ಕದ್ದವರು ಯಾರು ಎಂಬುದು ತಿಳಿಯುತ್ತದೆ’ ಎಂದು ಪ್ರಧಾನ ಅರ್ಚಕ ಸತ್ಯನಾರಾಯಣ ಶಾಸ್ತ್ರಿ ಹೇಳಿದರು.

‘ಮೊದಲು ಜಾತ್ರೆ, ಜನ್ಮೋತ್ಸವ ಹಾಗೂ ನವರಾತ್ರಿಯ ಸಂದರ್ಭಗಳಲ್ಲಿ ಮಾತ್ರ ದೇವಿಗೆ ಪಾದುಕೆ–ಕಿರೀಟ ಧಾರಣೆ ಮಾಡಲಾಗುತ್ತಿತ್ತು. ಉತ್ಸವಗಳು ಮುಗಿದ ಮರುದಿನವೇ ಆಡಳಿತ ಮಂಡಳಿಗೆ ಆಭರಣ ಹಿಂದಿರುಗಿಸಲಾಗುತ್ತಿತ್ತು. ಆದರೆ, ಮೇ 24ರಂದು ಅಮ್ಮನವರ ಶತಮಾನೋತ್ಸವ ಆಚರಿಸಿದ ನಂತರ ಆಭರಣ ಕಳಚಿರಲಿಲ್ಲ. ನೂರು ವರ್ಷಗಳ ಇತಿಹಾಸ ಇರುವ ದೇವಾಲಯಕ್ಕೆ ನಮ್ಮವರೇ ಕಳಂಕ ತಂದು ಬಿಟ್ಟರು’ ಎಂದು ಕಿಡಿಕಾರಿದರು.

ಒಡವೆ ಏಕೆ ತೆಗೆಯಲಿಲ್ಲ: ‘ಪ್ರತಿದಿನ ಪೂಜೆ ಮುಗಿದ ಬಳಿಕ ಮಾಂಗಲ್ಯ ಹೊರತುಪಡಿಸಿ ದೇವಿಯ ಮೇಲಿನ ಮೂಗುತಿ, ವಜ್ರಾಂಗಿ, ಕಿರೀಟ ಹಾಗೂ ಪಾದುಕೆಗಳನ್ನು ತೆಗೆಯಲಾಗುತ್ತದೆ. ಮರುದಿನ ಅಭಿಷೇಕ ನಡೆಸಿ ಪುನಃ ಆಭರಣ ಧಾರಣೆ ಮಾಡಲಾಗುತ್ತದೆ. ಆದರೆ, ಜೂನ್ 9ರ ರಾತ್ರಿ ಸತ್ಯನಾರಾಯಣ ಶಾಸ್ತ್ರಿ ಅವರು ಒಡವೆಯನ್ನು ತೆಗೆಯದೆ, ದೇವಾಲಯದ ಬೀಗ ಹಾಕಿಕೊಂಡು ಹೋಗಿದ್ದು ಏಕೆ’ ಎಂದು ಅರ್ಚಕ ನಾಗರಾಜ್‌ಶಾಸ್ತ್ರಿ ಪ್ರಶ್ನಿಸಿದರು.

‘ಮರುದಿನ ಬೆಳಿಗ್ಗೆ ಕರೆ ಮಾಡಿದ ಅವರು, ನಾನು ಕ್ಷೌರ ಮಾಡಿಸಲು ಹೋಗುತ್ತಿದ್ದೇನೆ. ಹೀಗಾಗಿ ನೀವೇ ಹೋಗಿ ಬಾಗಿಲು ತೆರೆಯಿರಿ ಎಂದರು. ಅವರ ಸೂಚನೆಯಂತೆ ಆ ದಿನ ನಾನೇ ಗರ್ಭಗುಡಿ ಪ್ರವೇಶಿಸಬೇಕಾಯಿತು. ಆಭರಣಕ್ಕೆ ಕತ್ತರಿ ಬಿದ್ದಿರುವ ವಿಷಯ ತಿಳಿಯುತ್ತಿದ್ದಂತೆಯೇ ಸಮಿತಿ ಸದಸ್ಯ ಚೆಲುವರಾಜು ಅವರಿಗೆ ವಿಷಯ ತಿಳಿಸಿದ್ದೆ’ ಎಂದರು.

ಕಾಣಿಕೆಗಾಗಿ ಜಗಳ?: ‘ಕಿರೀಟ ಒಟ್ಟು 512 ಗ್ರಾಂ ತೂಕವಿದೆ. ಪಾದುಕೆ 837 ಗ್ರಾಂ ಇದೆ. ಹೊರಗಿನ ಕಳ್ಳರಾಗಿದ್ದರೆ ಅಷ್ಟನ್ನೂ ತೆಗೆದುಕೊಂಡು ಹೋಗುತ್ತಿದ್ದರು. ಹೀಗಾಗಿ ಇದು ಆಭರಣದ ಆಸೆಗೆ ನಡೆದ ಕಳ್ಳತನವಲ್ಲ. ಆರತಿ ತಟ್ಟೆಗೆ ಬೀಳುವ ಕಾಣಿಕೆಯನ್ನು ಹಂಚಿಕೊಳ್ಳುವ ವಿಷಯದಲ್ಲಿ ಅರ್ಚಕರ ನಡುವೆ ಭಿನ್ನಾಭಿಪ್ರಾಯ ಇತ್ತು ಎನ್ನಲಾಗಿದೆ. ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಏಕೆ ದೂರು ತಡವಾಯಿತು?
‘ಕಳವು ನಡೆದಿರುವುದು ಗೊತ್ತಾದ ನಂತರ, ತಪ್ಪು ಮಾಡಿದ್ದರೆ ಒಪ್ಪಿಕೊಳ್ಳಲು ಅರ್ಚಕರಿಗೆ ಕಾಲಾವಕಾಶ ನೀಡಲಾಗಿತ್ತು. ಆದರೆ, ಎಲ್ಲರೂ ಆರೋಪ–ಪ್ರತ್ಯಾರೋಪದಲ್ಲಿ ಕಾಲ ದೂಡಿದರು. ಇದರಿಂದ ಪೊಲೀಸ್ ಠಾಣೆಯ ಮೆಟ್ಟಿಲೇರಬೇಕಾಯಿತು’ ಎಂದು ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿ ಹೇಳಿದರು.

ಕುಟುಂಬಗಳ ಕಲಹ
‘ಸತ್ಯನಾರಾಯಣ ಶಾಸ್ತ್ರಿ, ಸೋಮಶೇಖರ್ ಶರ್ಮಾ ಹಾಗೂ ಸಹಾಯಕ ಅರ್ಚಕ ಸತೀಶ್ ಒಂದೇ ಕುಟುಂಬಕ್ಕೆ ಸೇರಿದವರು. ಈ ಕಾರಣಕ್ಕೆ ಅವರಿಗೆ ನನ್ನನ್ನು ಕಂಡರೆ ಆಗುವುದಿಲ್ಲ. ಸೋಮಶೇಖರ್ ಅವರ ತಂದೆ ಯಾರ ಅನುಮತಿಯನ್ನೂ ಪಡೆಯದೆ ಇಲ್ಲಿನ ನವಗ್ರಹ ದೇವಸ್ಥಾನದಲ್ಲಿ ತೀರ್ಥ ಕೊಡುತ್ತಾರೆ. ಸೋಮಶೇಖರ್ ಸಹ ನಕಲಿ ದಾಖಲೆ ಸಲ್ಲಿಸಿ ದೇವಾಲಯ ಸೇರಿಕೊಂಡಿದ್ದಾರೆ’ ಎಂದು ನಾಗರಾಜ್ ರಾವ್ ಆರೋಪಿಸಿದರು.

Write A Comment