ಬೆಂಗಳೂರು, ಜೂ.26-ನಗರದ ಎಚ್‌ಎಸ್‌ಆರ್ ಲೇಔಟ್‌ನ ಹೊಸಪಾಳ್ಯ ಸಮೀಪ ಇರುವ ತ್ಯಾಜ್ಯ ಸಂಸ್ಕರಣಾ ಘಟಕದ ಆವರಣದೊಳಗೆ ಕೆಲಸ ಮಾಡುವಾಗ 10 ವರ್ಷದ ಬಾಲಕ ಯಂತ್ರಕ್ಕೆ ಸಿಲುಕಿ ಸಾವನ್ನಪ್ಪಿರುವ ಘಟನೆ ಸಂಬಂಧ ವಿಶೇಷ ಆಯುಕ್ತ ದರ್ಪಣ್ ಜೈನ್ ವಿರುದ್ಧ ಮುಖ್ಯಮಂತ್ರಿ
ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿನ್ನೆ ಯಂತ್ರಕ್ಕೆ ಸಿಲುಕಿ ಬಾಲಕನು ಸಾವನ್ನಪ್ಪಿರುವ ಘಟನೆ ಅಧಿಕಾರಿಗಳ ನಿರ್ಲಕ್ಷ್ಯವೆಂಬಂತೆ ತೋರುತ್ತಿದೆ ಎಂದು ದರ್ಪಣ್ ಜೈನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ತ್ಯಾಜ್ಯ ಸಂಸ್ಕರಣಾ ಘಟಕದ ಆವರಣಕ್ಕೆ ಹೊರಗಿನವರು ಪ್ರವೇಶಿಸದಂತೆ ತಡೆಗೋಡೆ ನಿರ್ಮಾಣ ಮಾಡಲಾಗಿತ್ತು. ಆದರೆ ಅದನ್ನು ತೆರವುಗೊಳಿಸಿರುವುದರಿಂದ ಹೊರಗಿನವರ ಪ್ರವೇಶಕ್ಕೆ ಕಾರಣವಾಗಿದೆ.
ಸರ್ಕಾರದ ಅಂಗ ಸಂಸ್ಥೆಯಾದ ಕೆಸಿಡಿಸಿಯಲ್ಲಿ ನರಸಿಂಹ ಎಂಬ ಬಾಲಕ ಕೆಲಸ ಮಾಡುತ್ತಿದ್ದ. ಸೋಮಸುಂದರಪಾಳ್ಯದ ನಿವಾಸಿ ವರಲಕ್ಷ್ಮಿ ಎಂಬುವವರ ಮಗ ನಿನ್ನೆ ಕೆಲಸ ಮಾಡುವ ಸಂದರ್ಭದಲ್ಲಿ ಸಂಸ್ಕರಣಾ ಯಂತ್ರಕ್ಕೆ ಆಕಸ್ಮಿಕವಾಗಿ ಸಿಲುಕಿ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಸಂಬಂಧ ನಿನ್ನೆ ಸ್ಥಳೀಯರು ಭಾರೀ ಪ್ರತಿಭಟನೆ ನಡೆಸಿದ್ದರು. ಸ್ಥಳಕ್ಕೆ ಆಗಮಿಸಿದ ದರ್ಪಣ್ ಜೈನ್ ಅಲ್ಲಿನ ಪ್ರತಿಭಟನಾನಿರತರೊಂದಿಗೆ ಮಾತುಕತೆ ನಡೆಸಿ ಮೃತನ ಕುಟುಂಬಕ್ಕೆ 2 ಲಕ್ಷ ರೂ.ಗಳ ಪರಿಹಾರ ಘೋಷಿಸಿದ್ದಾರೆ. ಹೊಸಪಾಳ್ಯದ ಸೋಮಸುಂದರಪಾಳ್ಯದಲ್ಲಿ ಕೆಸಿಡಿಸಿ ಘಟಕ ವಿರೋಧಿ ಸಮಿತಿ ಇಲ್ಲಿ ಸಮರ್ಪಕವಾಗಿ ಕಾಂಪೋಸ್ಟ್ ಅಭಿವೃದ್ಧಿ ನಿಗಮ ಕೆಲಸ ಮಾಡುತ್ತಿಲ್ಲ, ನಾಮಕಾವಸ್ತೆಗೆ ಈ ನಿಗಮವಿದೆ. ಕಸ ಸಂಸ್ಕರಣವನ್ನು ಮಾಡುತ್ತಿಲ್ಲ. ಕೇವಲ ಅಧಿಕಾರಿಗಳ ಲೆಕ್ಕಕ್ಕಷ್ಟೇ ಕಸ ಸಂಸ್ಕರಣೆ ನಡೆಯುತ್ತದೆ.ಬಾಕಿಯಂತೆ ರಾಶಿ ರಾಶಿ ಕಸ ಬಿದ್ದು ದುರ್ವಾಸನೆ ಹೊಡೆಯುತ್ತದೆ. ಇಲ್ಲಿನ ಪರಿಸರ ಮಲಿನಗೊಂಡು ಸುತ್ತಮುತ್ತ ಸಾರ್ವಜನಿಕರು ವಾಸಿಸುವುದು ಕಷ್ಟವಾಗಿದೆ. ಕುಡಿಯುವ ನೀರಿಗೆ ಈ ಕಸದ ವಿಷಯುಕ್ತ ನೀರು ಬೆರೆತು ಸಾಂಕ್ರಾಮಿಕ ರೋಗಗಳು ಹರಡುತ್ತಿದೆ. ಸರ್ಕಾರ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದೆ.
ಸಮರ್ಪಕವಾಗಿ ತ್ಯಾಜ್ಯ ಸಂಸ್ಕರಣೆ ಮಾಡಿದರೆ ಈ ಸಮಸ್ಯೆ ಉದ್ಭವಿಸುವುದಿಲ್ಲ ಕಾಟಾಚಾರಕ್ಕೆ ಇಲ್ಲಿ ತ್ಯಾಜ್ಯ ಸಂಸ್ಕರಣೆ ಮಾಡಲಾಗುತ್ತಿದೆ ಎಂದು ಇಲ್ಲಿನ ಹಲವರು ಆರೋಪಿಸಿದ್ದಾರೆ. ಆರೋಪ-ಪ್ರತ್ಯಾರೋಪಗಳೇನೇ ಇರಲಿ, ಮುಗ್ಧ ಜೀವಗಳು ಬಲಿಯಾಗಿವೆ. ಈಗಾಗಲೇ ಕಾಂಪೋಸ್ಟ್ ಅಭಿವೃದ್ಧಿ ನಿಗಮವನ್ನು ಸಂಪೂರ್ಣವಾಗಿ ಬಿಬಿಎಂಪಿಗೆ ವಹಿಸಲಾಗಿದೆ. ಅಲ್ಲಿನ ಅಧಿಕಾರಿಗಳು ಮುತವರ್ಜಿ ವಹಿಸಿ ಕೆಲಸ ಮಾಡಬೇಕಿತ್ತು. ಆದರೆ ಈ ಹಿಂದೆ ಇದ್ದ ನಿರ್ಲಕ್ಷ್ಯ ಧೋರಣೆಯೇ ಮುಂದುವರಿದಿದ್ದರಿಂದ ಈ ಅವಘಡ ಸಂಭವಿಸಿದೆ. ಸೋಮಸುಂದರಪಾಳ್ಯ ಮತ್ತೊಂದು ಮಂಡೂರು ಆಗುವ ಸಾಧ್ಯತೆ ಹೆಚ್ಚಾಗಿದೆ. ಈ ಸಬಂಧ ಕೆಸಿಡಿಸಿ ಅಧಿಕಾರಿಗಳು ಸ್ಪಷ್ಟನೆ ನೀಡಿ, ಮೃತ ಬಾಲಕ ನಮ್ಮಲ್ಲಿ ಕೆಲಸ ಮಾಡುತ್ತಿರಲಿಲ್ಲ. ಅತಿಕ್ರಮವಾಗಿ ಘಟಕದ ಆವರಣದೊಳಗೆ ಬಂದಿದ್ದಾನೆ. ಆವರಣದಲ್ಲಿರುವ ಚಿಂದಿ ಆಯ್ದುಕೊಂಡು ಹೋಗಲು ಬಂದಿರಬಹುದು ಎಂದು ತಿಳಿಸಿದ್ದಾರೆ. ಬಾಲಕ ಮೃತಪಟ್ಟಿರುವುದಕ್ಕೆ ಬಗ್ಗೆ ಕೆಸಿಡಿಸಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರಣ ಎಂದು ದೂರು ಬಂದಿದೆ. ಈ ಸಂಬಂಧ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಆಗ್ನೇಯ ಡಿಸಿಪಿ ಡಾ.ರೋಹಿಣಿ ಕಟೋಚ್ ಸಪಟ್ ತಿಳಿಸಿದ್ದಾರೆ.
——————
* ಕಾರ್ಖಾನೆಯಲ್ಲಿ ಯಂತ್ರಕ್ಕೆ ಸಿಲುಕಿ ಬಾಲಕನ ಸಾವು: ರೋಹಿಣಿ ಹೇಳಿಕೆ
ಬೆಂಗಳೂರು, ಜೂ.26- ನಗರದ ಸೋಮಸುಂದರ ಪಾಳ್ಯದಲ್ಲಿರುವ ರಾಜ್ಯ ಕಾಂಪೋಸ್ಟ್ ಅಭಿವೃದ್ಧಿ ನಿಗಮ (ಕೆಸಿಡಿಸಿ) ಕಾರ್ಖಾನೆಯಲ್ಲಿ ಮೃತಪಟ್ಟ ಹತ್ತು ವರ್ಷದ ಬಾಲಕ ನರಸಿಂಹಮೂರ್ತಿ ಯಂತ್ರಕ್ಕೆ ಸಿಲುಕಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ರೋಹಿಣಿ ಸಪಟ್ ತಿಳಿಸಿದ್ದಾರೆ. ಈ ಸಂಜೆಯೊಂದಿಗೆ ಮಾತನಾಡಿದ ಅವರು, ಪ್ರಾಥಮಿಕ ವೈದ್ಯಕೀಯ ವರದಿ ಆಧಾರದ ಮೇಲೆ ಈ ಬಾಲಕ ಯಂತ್ರಕ್ಕೆ ಸಿಲುಕಿರುವುದು ಗೊತ್ತಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ. ಮೇಲ್ನೋಟಕ್ಕೆ ಈ ಪ್ರಕರಣ ಕೆಸಿಡಿಸಿ ಕಾರ್ಖಾನೆಯವರ ನಿರ್ಲಕ್ಷ್ಯ ಎಂದು ಕಂಡುಬಂದಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಎಚ್‌ಎಸ್‌ಆರ್ ಲೇಔಟ್ ಸಮೀಪದ ಸೋಮಸುಂದರಪಾಳ್ಯದಲ್ಲಿ ಕೆಸಿಡಿಸಿ ಕಾರ್ಖಾನೆಯಿದ್ದು, ವಾರದಲ್ಲಿ ಎರಡು-ಮೂರು ದಿನ ಈ ಬಾಲಕ ಕೆಲಸಕ್ಕೆ ಹೋಗುತ್ತಿದ್ದ. ನಿನ್ನೆ ಮಧ್ಯಾಹ್ನ 1.15ರಲ್ಲಿ ಯಂತ್ರದ ಬಳಿ ಬಾಲಕನ ಮೃತದೇಹ ಕಂಡ ಸ್ಥಳೀಯರೊಬ್ಬರು ಬಾಲಕನ ತಾಯಿಗೆ ವಿಷಯ ತಿಳಿಸಿದ್ದರು. ಈ ಘಟನೆಯಿಂದ ಸ್ಥಳೀಯರು ಬಾಲಕನ ಪೋಷಕರೊಡಗೂಡಿ ಕಾರ್ಖಾನೆ ಆವರಣದಲ್ಲಿ ಬೆಳಗ್ಗೆ ಪ್ರತಿಭಟನೆ ನಡೆಸಿ ಪರಿಹಾರಕ್ಕೆ ಮನವಿ ಮಾಡಿ ಬಾಲಕನ ಸಾವಿಗೆ ಕಾರಣರಾದ ಕಾರ್ಖಾನೆ ಅಧಿಕಾರಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿದರು.