ಗುಜರಾತ್ ನಲ್ಲಿ ವರುಣನ ಆರ್ಭಟ ಮುಂದುವರೆದಿದ್ದು ಮಳೆಯ ಅಬ್ಬರಕ್ಕೆ ಬೆದರಿದ ಸಿಂಹವೊಂದು ದೇವಾಲಯದೊಳಗೆ ಪ್ರವೇಶಿಸಿ ಮಹಿಳೆಯರ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ.
ಮಳೆಯ ಅವಾಂತರದಿಂದ ಅಮ್ರೇಲಿ ಜಿಲ್ಲೆಯ ಮಂದಿರವೊಂದರಲ್ಲಿ ಅಡಗಿದ್ದ ಸಿಂಹಿಣಿಯೊಂದು ಮಹಿಳೆಯರು ಪೂಜೆ ಸಲ್ಲಿಸಲು ದೇವಸ್ಥಾನದೊಳಗೆ ಪ್ರವೇಶಿಸಿದಾಗ ಇದ್ದಕ್ಕಿದ್ದಂತೆ ಎರಗಿದ್ದು ಇಬ್ಬರಿಗೆ ಗಾಯಗಳಾಗಿವೆ ಎಂಬ ಮಾಹಿತಿ ಲಭಿಸಿದೆ.
ತಕ್ಷಣ ಅರಣ್ಯ ಇಲಾಖೆಯವರು ಸ್ಥಳಕ್ಕೆ ಧಾವಿಸಿ ಸುದೀರ್ಘ ಹದಿನೈದು ಘಂಟೆಗಳ ಕಾರ್ಯಾಚರಣೆ ನಡೆಸಿ ಸಿಂಹವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ, ಸಮೀಪದ ಶೆತ್ರುಂಜಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಿ ಪ್ರವಾಹದ ಭೀತಿ ಉಂಟಾಗಿದ್ದು ಈ ಕಾರಣದಿಂದ ಸಿಂಹಿಣಿ ಮಂದಿರದೊಳಗೆ ರಕ್ಷಣೆ ಪಡೆದಿದ್ದಿರಬಹುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.