ತಿರುಮಲ: ಮಾಜಿ ಸಚಿವ ಮುರುಗೇಶ್ ನಿರಾಣಿಯವರ ಒಡೆತನಕ್ಕೆ ಸೇರಿದ ನಿರಾಣಿ ಶುಗರ್ಸ್ ತಿರುಪತಿ ಲಡ್ಡು ತಯಾರಿಸಲು ಕಳುಹಿಸಿದ್ದ ಸುಮಾರು 25 ಟನ್ ಸಕ್ಕರೆಯನ್ನು ಕಳಪೆ ಗುಣಮಟ್ಟದ ಕಾರಣಕ್ಕಾಗಿ ತಿರಸ್ಕರಿಸಲಾಗಿದೆ ಎಂದು ತಿಳಿದುಬಂದಿದೆ.
ನಿರಾಣಿ ಶುಗರ್ಸ್ ನಿಂದ 11 ಲಾರಿಗಳಲ್ಲಿ 25 ಟನ್ ಸಕ್ಕರೆಯನ್ನು ಕಳುಹಿಸಲಾಗಿತ್ತೆಂದು ಹೇಳಲಾಗಿದ್ದು, ಟಿಟಿಡಿ ಅಧಿಕಾರಿಗಳು ಇದನ್ನು ಪಡೆದುಕೊಳ್ಳುವ ಮುನ್ನ ಪರೀಕ್ಷೆಗೊಳಪಡಿಸಿದ ವೇಳೆ ಟೆಂಡರ್ ನಲ್ಲಿ ತಿಳಿಸಿದ್ದಂತೆ ಗುಣಮಟ್ಟವನ್ನು ಕಾಯ್ದುಕೊಂಡಿರಲಿಲ್ಲವೆಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ಸಕ್ಕರೆಯನ್ನು ಸ್ವೀಕರಿಸಲು ನಿರಾಕರಿಸಿರುವ ಟಿಟಿಡಿ ಅಧಿಕಾರಿಗಳು ಟೆಂಡರ್ ನಲ್ಲಿ ಸೂಚಿಸಿದಂತೆ ಮುಂದಿನ 48 ಗಂಟೆಯೊಳಗಾಗಿ ನಮಗೆ ಗುಣಮಟ್ಟದ ಸಕ್ಕರೆಯನ್ನು ಒದಗಿಸಿ ಇಲ್ಲವಾದರೆ ಕಾನೂನು ಕ್ರಮ ಎದುರಿಸಲು ಸಿದ್ದರಾಗಿ ಎಂಬ ನೋಟಿಸ್ ನೀಡಿದ್ದಾರೆಂದು ತಿಳಿದುಬಂದಿದೆ. ಅತ್ತ ಸಕ್ಕರೆಯನ್ನು 11 ಲಾರಿಗಳಲ್ಲಿ ತೆಗೆದುಕೊಂಡು ಹೋಗಿದ್ದ ಲಾರಿ ಚಾಲಕರುಗಳು ತಲಾ 2.5 ಟನ್ ತೂಕದ ಸಕ್ಕರೆ ಚೀಲಗಳನ್ನಿರಿಸಿಕೊಂಡು ತಿರುಮಲ ಬೆಟ್ಟದ ಕೆಳಗೆ ಚಾಲನೆ ಮಾಡಿಕೊಂಡು ಬರುವುದೇಗೆ ಎಂಬ ಚಿಂತೆಯಲ್ಲಿದ್ದಾರಂತೆ.