Uncategorized

ಕುಡಿದು ಇಬ್ಬರು ಎಸ್‌ಐ ಮೇಲೆ ಹಲ್ಲೆ

Pinterest LinkedIn Tumblr

arrest

ಬೆಂಗಳೂರು: ಎಚ್‌ಎಸ್‌ಆರ್‌ ಲೇಔಟ್ ಹಾಗೂ ಇಂದಿರಾನಗರ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ಪಾನಮತ್ತ ಚಾಲಕರು ಕರ್ತವ್ಯ ನಿರತ ಎಸ್‌ಐಗಳ ಮೇಲೆ ಹಲ್ಲೆ ನಡೆಸಿದ್ದಾರೆ.

ಮಡಿವಾಳ ಸಂಚಾರ ಠಾಣೆ ಎಸ್‌ಐ ಚಂದ್ರಾಧರ ಅವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಇನ್ಫೆಂಟ್ರಿ ರಸ್ತೆಯ ಲೇಡಿಸ್ ಕ್ಲಬ್‌ ಉದ್ಯೋಗಿ ಕಿರಣ್‌ಕುಮಾರ್ ಎಂಬಾತನನ್ನು ಎಚ್‌ಎಸ್‌ಆರ್ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ವೆಂಕಟಾಪುರ ನಿವಾಸಿಯಾದ ಕಿರಣ್, ಸ್ನೇಹಿತರ ಜತೆ ಸರ್ಜಾಪುರಕ್ಕೆ ಹೋಗಿದ್ದ. ಅಲ್ಲಿಂದ ರಾತ್ರಿ 8.30ರ ಸುಮಾರಿಗೆ ಮನೆಗೆ ವಾಪಸಾಗುತ್ತಿದ್ದ. ಈ ವೇಳೆ ಹರಳೂರು ರಸ್ತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಚಂದ್ರಾಧರ ಅವರು, ಆತನ ಟ್ಯಾಕ್ಸಿಯನ್ನು ಅಡ್ಡಗಟ್ಟಿದ್ದಾರೆ. ಚಾಲಕ ಪಾನಮತ್ತನಾಗಿರುವುದನ್ನು ಖಚಿತಪಡಿಸಿಕೊಂಡ ಎಸ್‌ಐ, ಪ್ರಕರಣ ದಾಖಲಿಸಲು ಮುಂದಾದರು. ಆಗ ಆರೋಪಿ, ಅವರನ್ನು ಕೆಳಗೆ ತಳ್ಳಿ ಕಾರಿನೊಂದಿಗೆ ಪರಾರಿಯಾಗಲು ಯತ್ನಿಸಿದ ಎನ್ನಲಾಗಿದೆ.

ಕೆಳಗೆ ಬಿದ್ದ ಚಂದ್ರಾಧರ ಅವರ ಕೈ–ಕಾಲಿಗೆ ತರಚಿದ ಗಾಯಗಳಾದವು. ಅವರ ರಕ್ಷಣೆಗೆ ಧಾವಿಸಿದ ಸ್ಥಳೀಯರು, ಆರೋಪಿಯ ಕಾರನ್ನು ಅಡ್ಡಗಟ್ಟಿದರು. ವಿಷಯ ತಿಳಿದು ಹೊಯ್ಸಳ ವಾಹನದಲ್ಲಿ ಸ್ಥಳಕ್ಕೆ ತೆರಳಿದ ಎಚ್‌ಎಸ್‌ಆರ್‌ ಲೇಔಟ್ ಪೊಲೀಸರು ಆರೋಪಿಯನ್ನು ಠಾಣೆಗೆ ಎಳೆದೊಯ್ದರು. ತಪಾಸಣೆ ನಡೆಸಿದಾಗ ಕಿರಣ್ ದೇಹದಲ್ಲಿ ಮದ್ಯದ ಪ್ರಮಾಣ 370 ಮಿ.ಗ್ರಾಂನಷ್ಟಿತ್ತು’ ಎಂದು ಚಂದ್ರಾಧರ ತಿಳಿಸಿದರು.

ಮತ್ತೊಂದು ಪ್ರಕರಣ: ಬಿನ್ನಮಂಗಲ ಜಂಕ್ಷನ್‌ ಬಳಿ ಇಂದಿರಾನಗರ ಸಂಚಾರ ಠಾಣೆ ಎಸ್‌ಐ ನಂಜುಂಡಯ್ಯ ಪಾನಮತ್ತ ಯುವಕರಿಂದ ಹಲ್ಲೆಗೊಳಗಾಗಿದ್ದಾರೆ. ನಂಜುಂಡಯ್ಯ, ಕಾನ್‌ಸ್ಟೆಬಲ್ ಸಾಗರ್ ಜತೆ ರಾತ್ರಿ 11 ಗಂಟೆಗೆ ಬಿನ್ನಮಂಗಲ ಜಂಕ್ಷನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ತರುಣ್‌ ಎಂಬಾತ ಗುಪ್ತ ಹಾಗೂ ವಿನೋದ್ ಎಂಬ ಸ್ನೇಹಿತರ ಜತೆ ಕಾರಿನಲ್ಲಿ ಬಂದಿದ್ದಾನೆ. ಚಾಲಕ ತರುಣ್ ಪಾನಮತ್ತರಾಗಿದ್ದರಿಂದ ಪ್ರಕರಣ ದಾಖಲಿಸಿದ ನಂಜುಂಡಯ್ಯ, ಕಾರು ಬಿಟ್ಟು ಹೋಗುವಂತೆ ಸೂಚಿಸಿದರು. ನಿರಾಕರಿಸಿದ ತರುಣ್ ಮತ್ತು ಸ್ನೇಹಿತರು, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದರು. ಸ್ಥಳೀಯರ ನೆರವಿನಿಂದ ತರುಣ್ ಮತ್ತು ಗುಪ್ತನನ್ನು ಬಂಧಿಸಿದರು. ವಿನೋದ್ ಓಡಿ ಹೋದ’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.

Write A Comment