ವಾಷಿಂಗ್ಟನ್: ಅಮೆರಿಕದಲ್ಲಿ ಸಲಿಂಗ ವಿವಾಹ ಸಾಂವಿಧಾನಿಕ ಮಾನ್ಯತೆ ಪಡೆದುಕೊಂಡಿದೆ. ಅಮೆರಿಕದಲ್ಲಿ ಸಲಿಂಗಿಗಳು ತಮ್ಮ ತಮ್ಮ ನಡುವೆ ವಿವಾಹವಾಗುವ ಎಲ್ಲ ಹಕ್ಕು ಹೊಂದಿದ್ದಾರೆ ಎಂದು ಹೇಳುವ ಮೂಲಕ ಇಲ್ಲಿನ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.
ಅಮೆರಿಕದ 36 ರಾಜ್ಯಗಳಲ್ಲಿ ಈಗಾಗಲೇ ಸಲಿಂಗ ವಿವಾಹಕ್ಕೆ ಅವಕಾಶವಿದ್ದು, ಉಳಿದ 14 ರಾಜ್ಯಗಳಲ್ಲಿ ನಿಷೇಧ ಹೇರಲಾಗಿತ್ತು. ಶುಕ್ರವಾರದ ಕೋರ್ಟ್ ತೀರ್ಪಿನೊಂದಿಗೆ ಅಮೆರಿಕದ ಎಲ್ಲ ರಾಜ್ಯಗಳಲ್ಲೂ ಇನ್ನು ಮುಂದೆ ಸಲಿಂಗ ವಿವಾಹಕ್ಕೆ ಸಮಾನ ಕಾನೂನು ಅನ್ವಯವಾಗಲಿದೆ. ಇದರೊಂದಿಗೆ ಅಮೆರಿಕದಲ್ಲಿ ಸುಮಾರು 2 ದಶಕಗಳಿಂದ ನಡೆಯುತ್ತಿದ್ದ ಸುದೀರ್ಘ ಕಾನೂನು ಹೋರಾಟಕ್ಕೆ ತೆರೆ ಬಿದ್ದಿದ್ದು, ಸಲಿಂಗ ವಿವಾಹ ಬೆಂಬಲಿಗರ ಹೋರಾಟಕ್ಕೂ ಜಯ ಸಿಕ್ಕಿದೆ.
ಆದರೆ ಕೋರ್ಟ್ ತೀರ್ಪು ಮರುಪರಿಶೀಲನೆಗೆ ಕೋರಿ ಅರ್ಜಿ ಸಲ್ಲಿಸಲು 3 ವಾರಗಳ ಕಾಲಾವಕಾಶವಿರುವುದರಿಂದ ಈ ತೀರ್ಪು ಆ ನಂತರವಷ್ಟೇ ಜಾರಿಯಾಗಲಿದೆ. ಅಮೆರಿಕದ ಕೆಲ ರಾಜ್ಯಗಳ ಕಾನೂನುಗಳಲ್ಲಿ ವಿವಾಹವನ್ನು ಪುರುಷ ಮತ್ತು ಸ್ತ್ರೀಯ ಸಂಗಮವೆಂದು ವ್ಯಾಖ್ಯಾನಿಸಲಾಗಿದೆ. ಹೀಗಾಗಿ ಅಲ್ಲಿ ಸಲಿಂಗ ವಿವಾಹವನ್ನು ಕಾನೂನುಬಾಹಿರವೆಂದು ರದ್ದುಪಡಿಸಲಾಗಿದೆ. ಇದನ್ನು ಪ್ರಶ್ನಿಸಿ ಸಲಿಂಗ ವಿವಾಹ ಬೆಂಬಲಿಗರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಅಮೆರಿಕದಲ್ಲಿ ಅಂದಾಜು 3,90,000 ಮಂದಿ ಸಲಿಂಗ ವಿವಾಹವಾಗಿದ್ದಾರೆ. ಇನ್ನೂ 70,000 ಮಂದಿ ಸಲಿಂಗಿಗಳು ವಿವಾಹದ ಇಚ್ಛೆಯಿದ್ದರೂ ಆಯಾ ರಾಜ್ಯಗಳಲ್ಲಿ ಅದಕ್ಕೆ ಆಸ್ಪದವಿಲ್ಲದ ಕಾರಣ ಸೂಕ್ತ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.
ಕೋರ್ಟ್ ತೀರ್ಪು ಪ್ರಕಟವಾದ ಕೂಡಲೇ ನ್ಯಾಯಾಲಯದ ಹೊರಭಾಗದಲ್ಲಿ ನೆರೆದಿದ್ದ ಸಲಿಂಗ ವಿವಾಹ ಬೆಂಬಲಿಗರು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಒಬಾಮಾ ಸರ್ಕಾರವೂ ಸಲಿಂಗ ವಿವಾಹಕ್ಕೆ ಬೆಂಬಲ ವ್ಯಕ್ತಪಡಿಸಿದೆ.