ಕನ್ನಡ ವಾರ್ತೆಗಳು

ಪೊಲೀಸ್ ಕಸ್ಟಡಿಯಲ್ಲಿ ಪಿಯುಸಿಎಲ್ ಜಿಲ್ಲಾಧ್ಯಕ್ಷರ ಅಕಸ್ಮಿಕ ಸಾವು.

Pinterest LinkedIn Tumblr

pucl_devied_photo

ಮಂಗಳೂರು, ಜುಲೈ.04 : ವ್ಯಕ್ತಿಯೋರ್ವನ ಮೇಲೆ ದಾಖಲಾಗಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿ ಪೊಲೀಸ್ ಠಾಣೆಗೆ ತೆರಳಿದ್ದ ಪಿಯುಸಿಎಲ್ ದ.ಕ. ಜಿಲ್ಲಾಧ್ಯಕ್ಷರ ಮೇಲೆ ಕಂಕನಾಡಿ ಗ್ರಾಮಾಂತರ ಪೊಲೀಸರು ಹಲ್ಲೆ ನಡೆಸಿದ ಪರಿಣಾಮ ಅವರು ಪೊಲೀಸ್ ಕಸ್ಟಡಿಯಲ್ಲೇ ಸಾವನ್ನಪ್ಪಿದ್ದಾರೆಂದು ಆರೋಪಿಸ ಲಾಗಿದೆ.

ಪಿಯುಸಿಎಲ್ ದ.ಕ. ಜಿಲ್ಲಾಧ್ಯಕ್ಷ ಫರಂಗಿಪೇಟೆ ಮೇರೆಮಜಲು ನಿವಾಸಿ ಡೇವಿಡ್ ಡಿಸೋಜರ ನೆರೆಮನೆಯ ಸ್ಟಾನ್ಲಿ ಎಂಬವರ ಬಗ್ಗೆ ಕಂಕನಾಡಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿತ್ತು. ಈ ವಿಚಾರವಾಗಿ ಪೊಲೀಸರೊಂದಿಗೆ ಮಾತನಾಡಲೆಂದು ಸ್ಟಾನ್ಲಿ ಜೊತೆ ಡೇವಿಡ್ ಗುರುವಾರ ಸಂಜೆ 4 ಗಂಟೆಗೆ ಠಾಣೆಗೆ ತೆರಳಿದ್ದರು. ಈ ಸಂದರ್ಭ ಡೇವಿಡ್ ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಆಗ ಏರುಧ್ವನಿಯಲ್ಲಿ ಮಾತನಾಡಿದ ಡೇವಿಡ್‌ರನ್ನು ತನ್ನ ಚೇಂಬರ್‌ಗೆ ಕರೆಸಿಕೊಂಡ ಪೊಲೀಸ್ ಅಧಿಕಾರಿ ಅವರ ಮೇಲೆ ಗಂಭೀರ ಹಲ್ಲೆ ನಡೆಸಿದ್ದಾರೆ. ಪೊಲೀಸರ ಈ ದೌರ್ಜನ್ಯದಿಂದ ಅವರು ಕಸ್ಟಡಿಯಲ್ಲಿ ಗುರುವಾರವೇ ಮೃತಪಟ್ಟಿದ್ದಾರೆ. ಆದರೆ ಪ್ರಕರಣ ಇಂದಷ್ಟೇ ಬೆಳಕಿಗೆ ಬಂದಿದೆ ಎಂದು ಪಿಯುಸಿಎಲ್‌ನ ಮುಖಂಡರು ಆರೋಪಿಸಿದ್ದಾರೆ.

ಡೇವಿಡ್ ಮೃತಪಟ್ಟಿರುವುದನ್ನು ಖಚಿತಪಡಿಸಿಕೊಂಡ ಪೊಲೀಸರು ಖಾಸಗಿ ಕಾರೊಂದನ್ನು ಕರೆಸಿ ನಗರದ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಿದ್ದಾರೆ. ಬಳಿಕ ಅವರು ಮೃತಪಟ್ಟಿರುವುದಾಗಿ ಪೊಲೀಸರು ಘೋಷಿಸಿದ್ದಾರೆ ಎಂದು ಪಿಯುಸಿಎಲ್‌ನ ಮುಖಂಡರು ಆರೋಪಿಸಿದ್ದಾರೆ.

ಕಮಿಷನರ್‌ಗೆ ಮನವಿ:
ಪಿಯುಸಿಎಲ್‌ನ ದ.ಕ. ಜಿಲ್ಲಾಧ್ಯಕ್ಷ ಡೇವಿಡ್‌ರ ಕಸ್ಟಡಿ ಸಾವು ಸಂಭವಿಸಿದೆ ಎಂದು ಆರೋಪಿಸಿ ಸಂಘಟನೆಯ ಮುಖಂಡರು ಶುಕ್ರವಾರ ನಗರ ಪೊಲೀಸ್ ಆಯುಕ್ತ ಎಸ್.ಮುರುಗನ್‌ರಿಗೆ ಮನವಿ ಸಲ್ಲಿಸಿದ್ದಾರೆ. ಪ್ರಕರಣವೊಂದಕ್ಕೆ ಸಂಬಂಧಿಸಿ ವ್ಯಕ್ತಿಯೋರ್ವರ ಜೊತೆ ಕಂಕನಾಡಿ ಗ್ರಾಮಾಂತರ ಠಾಣೆಗೆ ತೆರಳಿದ್ದ ಡೇವಿಡ್‌ರನ್ನು ಪೊಲೀಸರು ಗಂಭೀರ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ ಎಂದು ಮುಖಂಡರು ಆರೋಪಿಸಿದ್ದಾರೆ.

‘ಕುಸಿದು ಬಿದ್ದಿದ್ದರು; ಆಸ್ಪತ್ರೆಗೆ ದಾಖಲಿಸಿದ್ದೆವು’ :
ಕಂಕನಾಡಿ ಗ್ರಾಮಾಂತರ ಠಾಣಾ ಪೊಲೀಸರು ಹೇಳುವ ಪ್ರಕಾರ, ಸ್ಟಾನ್ಲಿ ಹಾಗೂ ಅವರ ಪತ್ನಿಯ ನಡುವೆ ವೈಮನಸ್ಸಿದ್ದು, ಈ ವಿಷಯದಲ್ಲಿ ಪತ್ನಿಯು ಪತಿ ವಿರುದ್ಧ ಕೇಸು ದಾಖಲಿಸಿದ್ದರು. ಈ ವಿಷಯವಾಗಿ ಮಾತನಾಡಲು ಡೇವಿಡ್ ಠಾಣೆಗೆ ಬಂದು ಗಲಾಟೆ ಮಾಡಿದ್ದಾರೆ. ಇನ್ಸ್‌ಪೆಕ್ಟರ್ ಪ್ರಮೋದ್ ಅವರು ಡೇವಿಡ್‌ರನ್ನು ಸಮಾಧಾನಿಸಿ ಪತಿ-ಪತ್ನಿ ಗಲಾಟೆಯಲ್ಲಿ ನೀವು ಮಧ್ಯೆ ಪ್ರವೇಶಿಸಬೇಡಿ ಎಂದು ಕಿವಿಮಾತು ಹೇಳಿದ್ದಾರೆ. ಈ ವೇಳೆ ಡೇವಿಡ್‌ರವರು ಸ್ಟಾನ್ಲಿ ಪತ್ನಿ ಮೇಲೂ ಹಲ್ಲೆಗೆ ಮುಂದಾಗಿದ್ದು, ಅವರ ಮಗ ಮಧ್ಯಪ್ರವೇಶಿಸಿ ತಡೆದಿದ್ದರು. ಇವೆಲ್ಲವು ಠಾಣೆಯಲ್ಲಿ ನಡೆಯುತ್ತಿದ್ದುದರಿಂದ ಅಧಿಕಾರಿಗಳು ಡೇವಿಡ್‌ರಿಗೆ ಬುದ್ಧಿವಾದ ಹೇಳಿದ್ದಾರೆ. ಆದರೆ ಡೇವಿಡ್ ಪೊಲೀಸ್ ಹಾಗೂ ಅಧಿಕಾರಿಗಳನ್ನು ಉದ್ದೇಶಿಸಿ ಏರು ಧ್ವನಿಯಲ್ಲಿ ಮಾತನಾಡುತ್ತಿದ್ದರು. ಬಳಿಕ ಹೃದ್ರೋಗಿಯಾಗಿದ್ದ ಡೇವಿಡ್ ಸ್ಥಳದಲ್ಲೇ ಕುಸಿದುಬಿದ್ದಿದ್ದು, ತಕ್ಷಣ ಅವರನ್ನು ರಾತ್ರಿ 9 ಗಂಟೆ ಸುಮಾರಿಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದೇವೆ. ಆದರೆ ಅವರು ಅಲ್ಲಿ ಮೃತಪಟ್ಟಿದ್ದಾರೆ ಎನ್ನುತ್ತಾರೆ.

Write A Comment