ಟೊರಾಂಟೊ(ಕೆನಡ),ಜುಲೈ.04 : ರಾಷ್ಟ್ರ ಕವಿ ಡಾ.ಜಿ.ಎಸ್. ಶಿವರುದ್ರಪ್ಪ ವೇದಿಕೆ. ಕನ್ನಡಿಗರು ವಿಶ್ವದ ಯಾವುದೇ ಮೂಲೆಯಲ್ಲಿರಲಿ ಅವರ ಧ್ಯೇಯ ಉದಾತ್ತವಾದುದು ಹಾಗೂ ಅವರ ಮಾನವೀಯ ಮೌಲ್ಯ ಅತ್ಯಂತ ಶ್ರೇಷ್ಟವಾದುದು ಎಂದು ಸಾಹಿತಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ 11ನೇ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನಾಧ್ಯಕ್ಷ ಡಾ.ಎಲ್. ಹನುಮಂತಯ್ಯ ಹೇಳಿದರು.
ಕೆನಡಾದ ಕನ್ನಡ ಕಸ್ತೂರಿ ರೇಡಿಯೊ ಹಾಗೂ ಮಂಗಳೂರಿನ ಹೃದಯವಾಹಿನಿ ಬಳಗ ಟೊರಾಂಟೊದ ಗ್ರ್ಯಾಂಡ್ ವಿಕ್ಟೋರಿಯಾ ಸಭಾಂಗಣದಲ್ಲಿ ಏರ್ಪಡಿಸಿದ್ದ ಎರಡು ದಿನಗಳ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮಾತನಾಡಿದ ಅವರು ಕನ್ನಡಿಗರು ಶಾಂತಿಪ್ರಿಯರು ಹಾಗೂ ಸಹಬಾಳ್ವೆಗೆ ಹೆಸರಾದವರು ಎಂದರು.
ಯಾವುದೇ ಭಾಷೆಯನ್ನು ಅನ್ನದ ಭಾಷೆಯನ್ನಾಗಿ ಮಾಡದೇ ಹೋದರೆ ಅಂತಹ ಭಾಷೆ ಜನರಿಂದ ದೂರವಾಗುವ ಸಂಭವ ಇರುತ್ತದೆ ಎಂದು ಎಚ್ಚರಿಸಿದರು. ಭಾರತದ ಕೆಲವೇ ಪ್ರಾಚೀನ ಭಾಷೆಗಳಲ್ಲಿ ಕನ್ನಡವೊ ಒಂದು, ಅಮೂಲ್ಯವಾದ ಸಾಹಿತ್ಯದಿಂದ ಶ್ರೀಮಂತವಾಗಿರುವಂತಹದ್ದು, ಕನ್ನಡಿಗರು ವಿದೇಶಗಳಲ್ಲಿ ಸಹ ಅಲ್ಲಿನ ಸ್ಥಳೀಯ ಭಾಷೆ ಕಲಿತು ಜೊತೆಗೆ ಕನ್ನಡ ಪ್ರೇಮ ಮೆರೆಯುತ್ತಿರುವುದು ಶ್ಲಾಘನೀಯ ಎಂದರು.
ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಅವರು ಭಾಷೆ, ಸಂಸ್ಕೃತಿ, ಪರಂಪರೆ ಬೆಳೆಸಲು ಕರ್ನಾಟಕ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ ಎಂದರು. ಅನಿವಾಸಿ ಭಾರತೀಯರ ಭಾಷಾ ಪ್ರೇಮ ಮೆಚ್ಚುವಂತಹದ್ದು ಸಮ್ಮೇಳನದ ಯಶಸ್ಸಿಗಾಗಿ ಸಂಘಟಕರಾದ ಬಿ.ವಿ. ನಾಗರಾಜು ಹಾಗೂ ಕೆ.ಪಿ. ಮಂಜುನಾಥ್ ಸಾಗರ್ ಅವರನ್ನು ಅಭಿನಂದಿಸಿದರು. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವಿಡಿಯೋ ಸಂದೇಶವನ್ನು ಸಮಾರಂಭದಲ್ಲಿ ತೆರೆಯ ಮೇಲೆ ಬಿತ್ತರಿಸಲಾಯಿತು. ಸಾಗರದಾಚೆಗಿನ ಕನ್ನಡ-ಉಳಿಸಿ ಬೆಳೆಸುವ ಕಾರ್ಯ ಯಶಸ್ವಿಯಾಗಲಿ ಎಂದು ಹಾರೈಸಿದರು.
ಪ್ರಾಸ್ತಾವಿಕ ನುಡಿಗಳನ್ನು ಆಡಿದ ಹೃದಯವಾಹಿನಿ ಬಳಗದ ಕೆ.ಪಿ. ಮಂಜುನಾಥಸಾಗರ್ ಅವರು ಹೆಚ್ಚು ಖ್ಯಾತಿ ಪಡೆಯದೆ ಎಲೆ ಮರೆಯ ಕಾಯಿಯಂತೆ ಇರುವ ಕಲಾವಿದರಿಗೆ ಇಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು. ಇದುವರೆಗೆ ವಿವಿಧ ದೇಶಗಳಲ್ಲಿ ಹತ್ತು ಸಮ್ಮೇಳನಗಳನ್ನು ನಡೆಸಿದ್ದು ಇದು ಹನ್ನೊಂದನೆಯದು ಎಂದರು. ಕೆನಡಾದ ಸ್ಥಳೀಯ ಸರ್ಕಾರದ ರಾಜ್ಯ ಸಚಿವೆ ದೀಪಿಕಾ ದಾಮೆರ್ಲಾ, ಸೆನೆಟರ್ ಆಶಾ ಸೇಟ್, ಸಂಸದೀಯ ಕಾರ್ಯದರ್ಶಿ ಡಾ. ಪರಮ್ ಗಿಲ್, ಭಾರತದ ಕೌನ್ಸುಲ್ ಜನರಲ್ ಅಖಿಲೇಶ್ ಮಿಶ್ರ ಅವರು ಮಾತನಾಡಿದರು. ಕೆನಡಾದ ಸಂಸದ ಬಾಲಘೋಷಲ್ ಹಾಗೂ ಕನ್ನಡ ಚಿತ್ರ ನಟ ದರ್ಶನ್ ತೂಗುದೀಪ ಮಾತನಾಡಿದರು. ಸ್ವಾಗತ ಭಾಷಣ ಮಾಡಿದ ಬಿ.ವಿ. ನಾಗ್ ಸಂಸ್ಥೆಯ ಬಿ.ವಿ. ನಾಗರಾಜು ಅವರು ಕನ್ನಡ ಕಸ್ತೂರಿ ರೇಡಿಯೋದ ದಶಮಾನೋತ್ಸವದ ಸಂದರ್ಭದಲ್ಲಿ ಈ ವಿಶ್ವಕನ್ನಡ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದರು.
ಉದ್ಘಾಟನಾ ಸಮಾರಂಭದಲ್ಲಿ ಬೆಂಗಳೂರಿನ ಕಿಕ್ಕೇರಿ ಕೃಷ್ಣಮೂರ್ತಿ ಹಾಗೂ ತಂಡದವರು ಭಾವಗೀತೆಗಳನ್ನು ಹಾಡಿ ರಂಜಿಸಿದರು. ಮುಂಬೈನ ಅರುಣೋದಯ ಕಲಾನಿಕೇತನದ ಸದಸ್ಯರು ನೃತ್ಯ ಪ್ರದರ್ಶಿಸಿದರು. ಸ್ಥಳೀಯ ಕಲಾವಿದರು ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಕೆನಡಾದ ಕನ್ನಡಿಗರ ಮಕ್ಕಳಿಂದ ಫ್ಯಾಷನ್ ಶೋ ನಡೆಯಿತು.
ಸ್ಥಳೀಯ ಕಲಾವಿದೆ ಕನ್ನಡತಿ ಶ್ರೀಮತಿ ಲತಾ ಪಾದ ಅವರನ್ನು ಸನ್ಮಾನಿಸಲಾಯಿತು.