ಕಠ್ಮಂಡು, ಜು.5-ಕಳೆದ ಏಪ್ರಿಲ್-ಮೇನಲ್ಲಿ ಸಂಭವಿಸಿದ ಭೂಕಂಪದಿಂದ ಜರ್ಝರಿತಗೊಂಡಿರುವ ನೇಪಾಳದಲ್ಲಿ ಇಂದು ಮತ್ತೆ ಎರಡು ಬಾರಿ ಲಘು ಕಂಪನಗಳು ಸಂಭವಿಸಿದ್ದು, ಸಾವಿರಾರು ಜನ ಭಯಭೀತರಾಗಿ ಮನೆಗಳಿಂದ ಹೊರಗೋಡಿ ಬಂದ ಘಟನೆ ನಡೆಯಿತು. ಬೆಳಗಿನ ಜಾವ 1.27ರ ಸಮಯ ಸಿಂಧೆ ಪಾಲ್ ಚೌಕ್‌ನಲ್ಲಿ ಅಡಿಕೇಂದ್ರ
ಹೊಂದಿದ್ದ 4-6 ತೀವ್ರತೆಯ ಕಂಪನ ಉಂಟಾಗಿದೆ. ನಂತರ ಬೆಳಗ್ಗೆ 10 ಗಂಟೆ ಸುಮಾರಿನಲ್ಲಿ ಧಾಡಿಂಗ್ ಜಿಲ್ಲೆಯಲ್ಲಿ ಅಡಿಕೇಂದ್ರ ಹೊಂದಿದ್ದ 4.2ರಷ್ಟು ತೀವ್ರತೆಯ ಕಂಪನ ಸಂಭವಿಸಿದೆ. ಇದರಿಂದ ಭೀತಿಗೊಳಗಾದ ಸಾರ್ವಜನಿಕರು ಮಕ್ಕಳು-ಮರಿಗಳನ್ನು ಕಟ್ಟಿಕೊಂಡು ಮನೆಗಳಿಂದ ಹೊರಗೋಡಿಬಂದಿದ್ದಾರೆ.
ಸದ್ಯ ಯಾವುದೇ ಸಾವು-ನೋವಿನ ಬಗ್ಗೆ ವರದಿಯಾಗಿಲ್ಲ. ಏಪ್ರಿಲ್-ಮೇ ಭೂಕಂಪದಲ್ಲಿ 10 ಸಾವಿರಕ್ಕೂ ಹೆಚ್ಚು ಜನ ಸಾವನ್ನಪ್ಪಿ ಸಾವಿರಾರು ಮನೆಗಳು ನೆಲಕಚ್ಚಿದ್ದವು. ಸಾವಿರಾರು ಹೆಕ್ಟೇರ್ ಪ್ರದೇಶದ ಬೆಳೆಗಳು ಹಾಳಾಗಿದ್ದವು.