ಹರಾರೆ: ಜಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 4 ರನ್ ಗಳಿಂದ ರೋಚಕ ಜಯ ಗಳಿಸಿದೆ.
ಜಿಂಬಾಬ್ವೆಯ ಹರಾರೆ ಸ್ಪೋರ್ಟ್ ಕ್ಲಬ್ ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಜಿಂಬಾಬ್ವೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 255 ರನ್ ಗಳನ್ನು ದಾಖಲಿಸಿತು.
256 ರನ್ ಗಳ ಸಾಧಾರಣ ಗುರಿ ಬೆನ್ನತ್ತಿದ್ದ ಜಿಂಬಾಬ್ವೆ ನಿಗದಿತ ಓವರ್ ನಲ್ಲಿ 251 ರನ್ ಗಳಿಸಲಷ್ಟೇ ಶಕ್ಯವಾಯಿತು. ಪಂದ್ಯದ ಕೊನೆಯ ಎಸೆತದವರೆಗೂ ಜಿಂಬಾಬ್ವೆ ಪಂದ್ಯ ಗೆಲ್ಲುವ ನಿರೀಕ್ಷೆ ದಟ್ಟವಾಗಿತ್ತು. ಆದರೆ ಕೊನೆಯ ಓವರ್ ನಲ್ಲಿ ಜಿಂಬಾಬ್ವೆಗೆ ಗೆಲ್ಲಲು 10 ರನ್ ಬೇಕಿತ್ತು. ಈ ವೇಳೆ ಓವರ್ ಮಾಡಿದ ಭುವನೇಶ್ವರ್ ಕೇವಲ 5 ರನ್ ಗಳನ್ನು ನೀಡುವ ಮೂಲಕ ತಂಡಕ್ಕೆ ಗೆಲವು ತಂದು ಕೊಟ್ಟರು.
ಜಿಂಬಾಬ್ವೆಯ ಆಟಗಾರ ಚಿಗುಂಬುರಾ ಅಜೇಯ 104 ರನ್ ಗಳನ್ನು ಗಳಿಸಿದ್ದು, ತಂಡವನ್ನು ಗೆಲುವಿನ ದಡ ಸೇರಿಸಲು ಶತಪ್ರಯತ್ನ ಮಾಡಿದರು ಆದರೆ ಇದಕ್ಕೆ ಅಡ್ಡಿ ಮಾಡಿದ್ದು ಟೀಂ ಇಂಡಿಯಾ ಬೌಲರ್ ಗಳು. ತಂಡ ಕಡಿಮೆ ಮೊತ್ತ ಸಾಧಿಸಿದರು, ದಿಟ್ಟ ಬೌಲಿಂಗ್ ಮಾಡಿ ತಂಡಕ್ಕೆ ಜಯ ಸಿಗುವಂತೆ ಮಾಡಿದ್ದಾರೆ. ಸ್ಟುವರ್ಟ್ ಬಿನ್ನಿ, ಅಕ್ಷರ ಪಟೇಲ್ ತಲಾ 2 ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್, ಕುಲಕರ್ಣಿ ತಲಾ 1 ವಿಕೆಟ್ ಪಡೆದಿದ್ದಾರೆ.
ಜಿಂಬಾಬ್ವೆ ಪರ ವುಸಿ ಸಿಬಾಂಡ 20, ಚಿಭಾಭಾ 3, ಮಸಕಾಜ 34, ಸೀನ್ ವಿಲಿಯಮ್ಸ್ 0, ಸಿಕಂದರ್ ರಾಜಾ 37, ಮುಟುಂಬಾಮಿ 7 ಹಾಗೂ ಗ್ರೇಮ್ ಕ್ರೆಮರ್ 27 ರನ್ ಗಳಿಸಿದ್ದಾರೆ.
ಭಾರತ ಪರ ಮುರಳಿ ವಿಜಯ್ 1, ಅಂಜಿಕ್ಯಾ ರಹಾನೆ 34, ಅಂಬಟಿ ರಾಯುಡು ಅಜೇಯ 124, ಮನೀಷ್ ತಿವಾರಿ 2 , ರಾಬಿನ್ ಉತ್ತಪ್ಪ 0, ಸ್ಟುವರ್ಟ್ ಬಿನ್ನಿ 77 ಹಾಗೂ ಅಕ್ಷರ ಪಟೇಲ್ 2 ರನ್ ಗಳಿಸಿದ್ದಾರೆ.
ಜಿಂಬಾಬ್ವೆ ಪರ ತಿರಿಪನೋ, ಚಿಬಾಬಾ ತಲಾ 2 ವಿಕೆಟ್ ಪಡೆದರೆ, ವಿಟೋರಿ 1 ವಿಕೆಟ್ ಪಡೆದಿದ್ದಾರೆ.