ಮೊಳಕಾಲ್ಮೂರು, ಜು.14: ಚಿತ್ರದುರ್ಗ ಜಿಲ್ಲೆಯು ಬರದ ತಾಲೂಕು ಎಂದೇ ಹಣೆಪಟ್ಟಿ ಅಂಟಿಸಿಕೊಂಡಿದ್ದು, ಮೊಳಕಾಲ್ಮೂರು ತಾಲೂಕಿನ ಕೊಂಡ್ಲಹಳ್ಳಿ ಗ್ರಾಮದಲ್ಲಿ ಸಾಲಬಾಧೆಗೆ ನಲುಗಿದ ಮತ್ತೊಬ್ಬ ರೈತ ಇಂದು ಸಾವಿಗೆ ರಣಾಗಿರುವ ಘಟನೆ ನಡೆದದೆ.
64 ವರ್ಷದಗಿರಿಯಪ್ಪ ರೇಷ್ಮೆ ಬೆಳೆ ಬೆಳೆದು ಕೈ ಸುಟ್ಟುಕೊಂಡ ರೈತ. ವಿವಿಧ ಬ್ಯಾಂಕ್‌ಗಳಲ್ಲಿ ಸುಮಾರು 8 ಲಕ್ಷ ರೂ. ಸಾಲ ಮಾಡಿ ತನ್ನ 13 ಎಕರೆಯ ಪೈಕಿ 7 ಎಕರೆಯಲ್ಲಿ ರೇಷ್ಮೆ ಬೆಳೆದಿದ್ದ. 750 ಮೊಟ್ಟೆಯನ್ನೂ ತಂದಿದ್ದ. ಆದರೆ, ಇದ್ದಕ್ಕಿದ್ದಂತೆ ಬೋರ್‌ವೆಲ್ ಕೈ ಕೊಟ್ಟಿದ್ದರಿಂದ ರೇಷ್ಮೆ ಗಿಡವೂ ಒಣಗಿ ಮೊಟ್ಟೆಗಳೂ ಹಾಳಾದವು. ಇದರಿಂದ ಮನನೊಂದ ಗಿರಿಯಪ್ಪ ನಿನ್ನೆ ರಾತ್ರಿ ಮನೆಯಲ್ಲಿ ತನ್ನ ಹೆಂಡತಿ-ಮಕ್ಕಳ ಜತೆ ದುಃಖ ತೋಡಿಕೊಂಡಿದ್ದಾನೆ. ನಂತರ ನೇರವಾಗಿ ಕೊಂಡ್ಲಹಳ್ಳಿ ಊರ ಹೊರಗಿನ ಸರ್ವೋದಯ ಶಾಲೆಯ ಬಳಿ ತೆರಳಿ ಅಲ್ಲಿ ರಸ್ತೆ ಬದಿಯ ಮರಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ.
ರಾತ್ರಿ ಸುಮಾರು 12 ಗಂಟೆ ವೇಳೆಗೆ ಈ ಘಟನೆ ನಡೆದಿರಬಹುದೆಂದು ಪೊಲೀಸರು ಹೇಳಿದ್ದಾರೆ. ಮೃತ ರೈತ ಗಿರಿಯಪ್ಪ , ಪತ್ನಿ ಗಂಗಮ್ಮ (55) ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾನೆ. ವೃತ್ತ ನಿರೀಕ್ಷಕ ಜಿ.ಎಸ್.ತಿಪ್ಪೇಸ್ವಾಮಿ, ಇನ್‌ಸ್ಪೆಕ್ಟರ್ ಲೋಕೇಶ್ ಮತ್ತು ಅವರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿನ್ನೆ ಕೂಡ ಚಿತ್ರದುರ್ಗ ತಾಲೂಕಿನ ಕೂನಬೇವು ಗ್ರಾಮದ ರೈತ ಸಿದ್ದೇಶ್ (40) ಆತ್ಮಹತ್ಯೆಗೆ ಶರಣಾಗಿದ್ದ. ಜಿಲ್ಲೆಯಲ್ಲಿ ರೈತರ ಸರಣಿ ಸಾವು ಮುಂದುವರೆದಿದೆ.
ಸಾಲಗಾರರ ಕಾಟ ತಾಳಲಾರದೆ ರೈತ ಆತ್ಮಹತ್ಯೆ
ನಂಜನಗೂಡು: ಸಾಲ ಭಾದೆ ತಾಳಲಾರದೆ ರೈತನೊಬ್ಬ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರುವ ಘಟನೆ ತಾಲ್ಲೂಕಿನ ವಳಗೆರೆ ಗ್ರಾಮದಲ್ಲಿ ನಡೆದಿದೆ. ಕುಮಾರ್(30) ಆತ್ಮಹತ್ಯೆ ಮಾಡಿಕೊಂಡ ರೈತ.
ಸಿದ್ದಯ್ಯನ ಹುಂಡಿ ಗ್ರಾಮದ ರೈತ ಶಿವರಾಮೇಗೌಡ ಸಾಲಭಾದೆ ತಾಳದೆ ಆತ್ಮಹತ್ಯೆಮಾಡಿಕೊಂಡಿರುವ ಘಟನೆ ಹಸಿರಿರುವಾಗಲೇ ಮತ್ತು ನಗರ್ಲೆ ಗ್ರಾಮದ ರೈತರೊಬ್ಬರು ಕಬ್ಬಿನ ಬೆಳೆಗೆ ಬೆಂಬಲ ಬೆಲೆ ದೊರಕದ ಕಾರಣ ಬೆಳೆಯನ್ನು ನಾಶ ಮಾಡಿ ಆಕ್ರೋಶ ವ್ಯಕ್ತ ಪಡಿಸಿದ್ದರು. ಆದರೆ ಈಗ ವಳಗೆರೆ ಗ್ರಾಮದ ಕುಮಾರ್ ತನ್ನ ಹೊಲದಲ್ಲಿ ಬೆಳೆದ ಹತ್ತಿ ಬೆಳೆಗೆ 3 ಲಕ್ಷ ಸಾಲ ಮಾಡಿದ್ದು, ಬೆಳೆ ಸರಿಯಾಗಿ ಬಾರದ ಕಾರಣ ಸಾಲಗಾರರ ಕಾಟ ತಾಳಲಾರದೇ ಮನೆಯ ಕೊಠಡಿಯೊಂದರಲ್ಲೇ ನಿದ್ದೆ ಮಾತ್ರೆ ಸೇವಿಸಿದ್ದು, ವಿಲವಿಲ ಒದ್ದಾಡುತ್ತಾ ಕಿರುಚಿಕೊಂಡಾಗ ಆಗ ಮನೆಯವರೆಲ್ಲಾ ಈತನನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದಾಗ ಮಾರ್ಗ ಮಧ್ಯದಲ್ಲೆ ಸಾವನ್ನಪ್ಪಿದ್ದಾನೆ. ತಹಶೀಲ್ದಾರ್ ರಾಮಪ್ಪ, ಮೃತ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.
ಸಾಲಬಾಧೆ : ಕಬ್ಬೇನೂರು ರೈತ ಆತ್ಮಹತ್ಯೆ
ಧಾರವಾಡ: ರಾಜ್ಯದಲ್ಲಿ ರೈತರ ಸರಣಿ ಆತ್ಮಹತ್ಯೆ ಮುಂದುವರಿಯುತ್ತಲೇ ಇದ್ದು, ಸೋಮವಾರ ತಾಲೂಕಿನ ಕಬ್ಬೇನೂರು ಗ್ರಾಮದ ರೈತನೋರ್ವ ಸಾಲದಬಾಧೆ ತಾಳಲಾರದೇ ಸೋಮವಾರ ವಿಷಕಾರಿ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಗ್ರಾಮದ ಬಸವರಾಜ ಕುದರಿ(31) ಎಂಬ ಯುವ ರೈತನೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಎಂದು ತಿಳಿದಿದೆ. ಬಸವರಾಜ ತಾಲೂಕಿನ ಬೇಲೂರು ಕೈಗಾರಿಕಾ ಪ್ರದೇಶದ ಕಂಪೆನಿಯೊಂದರಲ್ಲಿ ಕೆಲವು ವರ್ಷ ಕೆಲಸ ಮಾಡಿದ್ದ. ತನ್ನ ಸಹೋದರನಿಗೆ ನೆರವಾಗಲೆಂದು ಆ ಕೆಲಸವನ್ನು ಬಿಟ್ಟು ಮನೆಯವರೊಂದಿಗೆ ಕೃಷಿ ಕೆಲಸದಲ್ಲಿ ತೊಡಗಿಕೊಂಡಿದ್ದ. ಕಳೆದ ಆರೇಳು ವರ್ಷಗಳಿಂದ ಬಸವರಾಜ ಕೃಷಿಯನ್ನೇ ಮಾಡುತ್ತಿದ್ದ.
ಬಸವರಾಜ ಕೃಷಿ ಕೆಲಸ ಮಾಡುತ್ತಿದ್ದಂತೆ ಇವರ ಸಹೋದರ ಅದೇ ಗ್ರಾಮದ ಗ್ರಾಮಲೆಕ್ಕಾಧಿಕಾರಿ ಕೈಯಲ್ಲಿ ಸಹಾಯಕನೆಂದು ಕೆಲಸಕ್ಕೆ ಸೇರಿಕೊಂಡಿದ್ದನು. ಬಸವರಾಜನಿಗೆ ಮೂವರು ಸಹೋದರಿಯರು ಹಾಗೂ ವಯಸ್ಸಾದ ತಂದೆ, ತಾಯಿ ಇದ್ದಾರೆ. ತನ್ನ ಸಹೋದರಿಯರ ಮದುವೆ ಮಾಡಲೆಂದು ಬಸವರಾಜ ತಮ್ಮ ಗ್ರಾಮದ ಸ್ವಸಹಾಯ ಸಂಘದಲ್ಲಿ ಮತ್ತು ಇನಾಂಹೊಂಗಲದ ಕೆವಿಜಿ ಬ್ಯಾಂಕ್ ಶಾಖೆಯಲ್ಲಿ ಒಟ್ಟು 2 ಲಕ್ಷ ಸಾಲ ಪಡೆದಿದ್ದ.
ವಿಪರ್ಯಾಸವೆಂದರೆ ಇವರ ಓರ್ವ ಸಹೋದರಿ ಕೂಡ ಸುಟ್ಟುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಳು. ಕೆಲವು ದಿನಗಳಿಂದ ಬಸವರಾಜ ಒಂದು ರೀತಿ ಇದ್ದ ಸೋಮವಾರ ಹೊಲದಿಂದ ಬಂದು ಮನೆಯಲ್ಲೇ, ಕಾಳಿನ ಚೀಲದಲ್ಲಿ ಹಾಕುವ ವಿಷಕಾರಿ ಮಾತ್ರೆಯನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಸಿಪಿಐ ಮೋತಿಲಾಲ್ ಪವಾರ ಹಾಗೂ ಗ್ರಾಮೀಣ ಠಾಣೆ ಪಿಎಸ್‌ಐ ಎಸ್.ಎಸ್.ಕಮತಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತಂತೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.