ಸಾಂದರ್ಭಿಕ ಚಿತ್ರ
ಪಾಟ್ನಾ: ಅಸ್ಪೃಶ್ಯತೆ ನಿವಾರಣೆಗೆ ಏನೇ ಕಾನೂನು, ಕಟ್ಟಳೆಗಳು ಬಂದರೂ ದೇಶದಲ್ಲಿ ಅದಿನ್ನೂ ಜೀವಂತವಾಗಿರುವುದಕ್ಕೆ ಸಾಕ್ಷಿಯಾಗಿ ಬಿಹಾರದಲ್ಲಿ ಪ್ರಭಾವಿಯೊಬ್ಬರ ಮನೆಯಲ್ಲಿ ಎತ್ತಿನ ಹೆಣ ಎತ್ತಲು ನಿರಾಕರಿಸಿದ್ದಕ್ಕೆ ಬಡವರಲ್ಲಿಯೇ ಬಡವರಾದ ಮಹಾದಲಿತರನ್ನು ಸಾಮಾಜಿಕವಾಗಿ ಬಹಿಷ್ಕರಿಸಲಾಗಿದೆ.
ಶೇಖ್‌ಪುರ ಜಿಲ್ಲೆಯ ಪಿಂಡಷರೀಫ್ ಹಳ್ಳಿಯ ಸುಮಾರು ಎರಡು ಡಜನ್ ಮಹಾದಲಿತರ ಕುಟುಂಬಗಳು ಬಹಿಷ್ಕಾರಕ್ಕೊಳಗಾಗಿವೆ. ಈ ಕುಟುಂಬಗಳಿಗೆ ಸ್ಥಳೀಯ ಅಂಗಡಿಗಳಲ್ಲಿ ಏನನ್ನೂ ಖರೀದಿಸಲು ಅನುವು ಮಾಡಿಕೊಡುತ್ತಿಲ್ಲ. ಅಷ್ಟೇ ಅಲ್ಲ, ಈ ಕುಟುಂಬಕ್ಕೆ ಸೇರಿದ ಮಕ್ಕಳನ್ನೂ ಶಾಲೆಯಿಂದ ಹೊರಗಿಡಲಾಗಿದೆ.
ಸಮಸ್ಯೆ ಶುರುವಾಗಿದ್ದೆಲ್ಲಿ?: ಹಳ್ಳಿಯಲ್ಲಿ ಪ್ರಭಾವಿ ವ್ಯಕ್ತಿಯಾದ ಜಿತೇಂದ್ರ ಚೌಧರಿ ಎಂಬವರ ಮನೆಯಲ್ಲಿ ಎತ್ತಿನ ಹೆಣ ಎತ್ತಲು ಸೀತಾರಾಮ್ ರಿವಿದಾಸ್ ಎಂಬ ಮಹಾದಲಿತರೊಬ್ಬರು ನಿರಾಕರಿಸಿದ್ದರು. ಇದರಿಂದ ಕುಪಿತಗೊಂಡ ಕೆಲವರು ಪಂಚಾಯಿತಿ ಕರೆದರು. ಹಳ್ಳಿಯಲ್ಲಿದ್ದ ಮಹಾದಲಿತ ಕುಟುಂಬಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಬಹಿಷ್ಕಾರ ನೀಡಿ, ತೀರ್ಪು ನೀಡಿದರು.
‘ಇದೊಂದು ಗಂಭೀರ ಪ್ರಕರಣವಾದ್ದರಿಂದ ಆರೋಪಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ,’ ಎಂದು ಶೇಖ್‌ಪುರ್ ಎಸ್ಪಿ ಧೀರಜ್ ಕುಮಾರ್ ತಿಳಿಸಿದ್ದಾರೆ. ಮಹಾದಲಿತರ ತಂಡವೊಂದು ಸೋಮವಾರ ಎಸ್ಪಿಯನ್ನು ಭೇಟಿಯಾಗಿತ್ತು.