ಹೊಸದಿಲ್ಲಿ: ಕ್ರಿಕೆಟ್ ಲೀಗ್ನಲ್ಲಿ ನಡೆದ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಹಗರಣ ಕುರಿತು ನಿವೃತ್ತ ನ್ಯಾ. ಆರ್. ಎಂ. ಲೋಧಾ ನೇತೃತ್ವದ ಸಮಿತಿ ತೀರ್ಪು ನೀಡಿದ ಮರುದಿನವೇ, ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಕೂಟವನ್ನು ಬಿಸಿಸಿಐ, ಸಿಎ ಹಾಗೂ ಸಿಎಸ್ಎ ಬುಧವಾರ ರದ್ದು ಪಡಿಸಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ, ಕ್ರಿಕೆಟ್ ಸೌತ್ ಆಫ್ರಿಕಾ ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾದ ಪ್ರತಿನಿಧಿಗಳನ್ನೊಳಗೊಂಡ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಕೂಟದ ಆಡಳಿತ ಮಂಡಳಿ ಅವಿರೋಧವಾಗಿ ಈ ನಿರ್ಣಯ ಕೈಗೊಂಡಿದೆ ಎಂದು ಭಾರತೀಯ ಕ್ರಿಕೆಟ್ ಮಂಡಳಿ ಪ್ರಕಟಣೆ ಹೊರಡಿಸಿದೆ.
ಪರಿಣಾಮವಾಗಿ, ಸೆಪ್ಟೆಂಬರ್ ಹಾಗೂ ಅಕ್ಟೋಬರ್ನಲ್ಲಿ ನಿಗದಿಯಾಗಿದ್ದ 2015ನೇ ಆವೃತ್ತಿಯ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಪಂದ್ಯಾವಳಿಗಳು ರದ್ದಾಗಲಿವೆ.
ವಾರ್ಷಿಕ ಟಿ20 ಪಂದ್ಯಾವಳಿಗಳ ಬಗ್ಗೆ ಆಸಕ್ತಿ ಕಡಿಮೆ ಆಗಿರುವ ಹಿನ್ನಲೆಯಲ್ಲಿ ಅವನ್ನು ರದ್ದು ಪಡಿಸಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
‘ವಿಶ್ವದ ನಾನಾ ಭಾಗಗಳ ಆಟಗಾರರ ಪ್ರತಿಭೆ ಪ್ರದರ್ಶನಕ್ಕೆ ಇದು ಅತ್ಯುತ್ತಮ ವೇದಿಕೆ ಆಗಿತ್ತು. ಕಳೆದ 6 ಆವೃತ್ತಿಯಲ್ಲಿ ಭಾಗಿಯಾಗಿರುವ ತಂಡಗಳಿಗೆ ಆಟ ಖುಷಿ ಕೊಟ್ಟಿದೆ. ದುರದೃಷ್ಟವಶಾತ್, ನಿರೀಕ್ಷೆ ಮಟ್ಟಕ್ಕೆ ಜನರನ್ನು ಸೆಳೆಯುವಲ್ಲಿ ಅದು ವಿಫಲವಾಗಿದೆ,’ ಎಂದು ಅವರು ಹೇಳಿದ್ದಾರೆ. ಬಿಸಿಸಿಐ, ಸಿಎ ಹಾಗೂ ಸಿಎಸ್ಎ ಸಹಯೋಗದಲ್ಲಿ 2009ರಲ್ಲಿ ಟಿ-20 ಕ್ರಿಕೆಟ್ ಕೂಟವನ್ನು ಆರಂಭಿಸಲಾಗಿತ್ತು.
ಎರಡು ತಂಡಕ್ಕೆ ನಿಷೇಧ:
ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಹಗರಣದ ಹಿನ್ನಲೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸುಪ್ರೀಂಕೋರ್ಟ್ ನಿಯೋಜಿತ ಲೋಧಾ ಸಮಿತಿ ಎರಡು ವರ್ಷಗಳ ನಿಷೇಧ ಹೇರಿದೆ. ಜತೆಗೆ, ಬೆಟ್ಟಿಂಗ್ನಲ್ಲಿ ಭಾಗಿಯಾಗಿರುವ ರಾಜಸ್ಥಾನ್ ರಾಯಲ್ಸ್ ತಂಡದ ಸಹ ಮಾಲೀಕ ರಾಜ್ ಕುಂದ್ರಾ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಗುರನಾಥ ಮೇಯ್ಯಪ್ಪನ್ ಅವರಿಗೆ ಎರಡು ವರ್ಷಗಳ ಕಾಲ ಕ್ರಿಕೆಟ್ನ ಯಾವುದೇ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ಆಜೀವ ನಿಷೇಧ ಹೇರಿದೆ.