ಪ್ರತಿಭಾವಂತ ನಟರು ತಾವು ನಿರ್ವಹಿಸುವ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡುವುದು, ನಟನೆ ಮುಗಿದರೂ ಕೆಲವು ಕಾಲ ಪಾತ್ರದ ಗುಂಗಿನಲ್ಲಿಯೇ ಇರುವುದು ಹೊಸತಲ್ಲ. ಆದರೆ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಅವರಿಗೆ ತಮ್ಮ ಹೊಸ ಚಿತ್ರದ ಪಾತ್ರ ತುಸು ಹೆಚ್ಚಾಗಿಯೇ ಕಾಡಿದೆ. ಅದರಿಂದ ಹೊರಬಂದು ಸಾಮಾನ್ಯ ಮನುಷ್ಯನಾಗಲೂ ಅವರು ತುಂಬ ಪ್ರಯತ್ನಪಟ್ಟಿದ್ದಾರೆ.
ಕೇತನ್ ಮೆಹ್ತಾ ಅವರ ನಿರ್ದೇಶನದ ‘ಮಾಂಝಿ– ದಿ ಮೌಂಟೇನ್ ಮೆನ್’ ಚಿತ್ರದ ತಮ್ಮ ಪಾತ್ರದ ಗುಂಗಿನಿಂದ ಬಿಡಿಸಿಕೊಳ್ಳಲು ಸಿದ್ದಿಕಿ ಒಂದೂವರೆ ತಿಂಗಳ ಕಾಲ ಒದ್ದಾಡಿದ್ದಾರೆ.
‘ಈ ಪಾತ್ರದ ಗುಂಗಿನಿಂದ ಹೊರಬರಲು ಒಂದೂವರೆ ತಿಂಗಳಿಂದ ಏನೇನೋ ಮಾಡಿದ್ದೇನೆ. ಎಂಟು ಹತ್ತು ದಿನ ಅಜ್ಞಾತನಾಗಿ, ನನ್ನ ಗುರತು–ಪರಿಚಯ ಇಲ್ಲದ ಜನರ ನಡುವೆ ಹೋಗಿ ನಾನೊಬ್ಬ ಸಾಮಾನ್ಯ ಮನುಷ್ಯನಾಗಿದ್ದೇನೆಯೇ ಎಂದು ಪರೀಕ್ಷಿಸಿಕೊಂಡಿದ್ದೇನೆ’ ಎಂದು ಇತ್ತೀಚೆಗೆ ಮುಂಬೈನಲ್ಲಿ ಈ ಸಿನಿಮಾದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಹೇಳಿದ್ದಾರೆ.
ಈ ಸಿನಿಮಾವು 22 ವರ್ಷಗಳ ಕಾಲ ಅವಿರತವಾಗಿ ದುಡಿದು ಪರ್ವತವನ್ನು ಕಡಿದು ರಸ್ತೆ ರೂಪಿಸಿದ ಬಿಹಾರದ ದಶರತ್ ಮಾಂಝಿ ಅವರ ಜೀವನವನ್ನು ಆಧರಿಸಿದೆ. ಆಗಸ್ಟ್ 21ರಂದು ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ರಾಧಿಕಾ ಆಪ್ಟೆ ನಾಯಕಿಯಾಗಿ ನಟಿಸಿದ್ದಾರೆ.