ಹೊಸಕೋಟೆ: ಪಟ್ಟಣದ ನಂದಶ್ರೀ ಕಲ್ಯಾಣ ಮಂಟಪದ ಬಳಿ ಇರುವ ಖಾಸಗಿ ಶಾಲೆಯ ಮಾಲೀಕ ಕೊಂಡಪಲ್ಲಿ ನಾನ್ ಚಾರ್ ರಾವ್ ಅಲಿಯಾಸ್ ಕೆ.ಎನ್.ರಾವ್ (40) ಎಂಬುವರನ್ನು ದುಷ್ಕರ್ಮಿಗಳು ಸೋಮ ವಾರ ರಾತ್ರಿ ಆವಲಹಳ್ಳಿಯಲ್ಲಿರುವ ಅವರ ಮನೆಯ ಬಳಿ ಕೊಲೆ ಮಾಡಿದ್ದಾರೆ.
ಆಂಧ್ರಪ್ರದೇಶ ಗುಂಟೂರಿನ ಕೆ.ಎನ್.ರಾವ್ ಮೂರು ವರ್ಷದ ಹಿಂದೆ ರಾಮಮೂರ್ತಿ ನಗರದ ನಾರಾಯಣ ಶಾಲೆಯಲ್ಲಿ ಕೆಲಸಕ್ಕೆ ಸೇರಿದ್ದರು. ಅಲ್ಲಿ ಒಂದು ವರ್ಷ ಕೆಲಸ ಮಾಡಿದ ನಂತರ ಮಂಡೂರು ಸಮೀಪದ ನಾರಾಯಣ ಶಾಲೆಗೆ ವರ್ಗವಾಗಿ ಅಲ್ಲಿ ಸಹಾಯಕ ಪ್ರಧಾನ ವ್ಯವಸ್ಥಾಪಕರಾಗಿ ಎರಡು ವರ್ಷ ಕೆಲಸ ನಿರ್ವಹಿಸಿದ್ದರು. ಇತ್ತೀಚೆಗೆ ರಾವ್ ಅವರು ನಾರಾಯಣ ಶಾಲೆ ತೊರೆದು ಹೊಸಕೋಟೆಯಲ್ಲಿ ಒಂದರಿಂದ ಐದನೇ ತರಗತಿ ಹಾಗೂ ಪ್ರಥಮ ಪಿಯುಸಿ ಇರುವ ‘ಮೆದಾಶ್ರೀ ಒಲಂಪಿಯಾಡ್’ ಎಂಬ ಶಾಲೆ ಆರಂಭಿಸಿದ್ದರು.
ಆವಲಹಳ್ಳಿಯಲ್ಲಿ ಪತ್ನಿ ಹಾಗೂ ಮಗಳೊಂದಿಗೆ ವಾಸಿಸುತ್ತಿದ್ದ ರಾವ್ ಅವರು ನಿತ್ಯ ಬೆಳಿಗ್ಗೆ ಮನೆಯಿಂದ ಹೊಸಕೋಟೆಯಲ್ಲಿದ್ದ ಶಾಲೆಗೆ ಬಂದು ವಾಪಸಾಗುತ್ತಿದ್ದರು. ಸೋಮವಾರ ರಾತ್ರಿ ಪತ್ನಿಗೆ ಮನೆಗೆ ಬರುತ್ತಿರುವುದಾಗಿ ಕರೆ ಮಾಡಿದ್ದ ರಾವ್ ಮನೆಗೆ ಬಂದಿರಲಿಲ್ಲ.
ಮಂಗಳವಾರ ಬೆಳಿಗ್ಗೆ 6 ಗಂಟೆಗೆ ರಾವ್ ಅವರ ಪತ್ನಿ ಮನೆ ಮುಂದಿನ ಖಾಲಿ ನಿವೇಶನದಲ್ಲಿ ಪತಿಯ ಕಾರು ನಿಂತಿದ್ದನ್ನು ನೋಡಿ ಹತ್ತಿರ ಹೋದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದರು. ರಾವ್ ಅವರು ಕಾರಿನಿಂದ ಕೆಳಗೆ ಇಳಿಯುವಾಗ ದುಷ್ಕರ್ಮಿಗಳು ಅವರಿಗೆ ಹರಿತವಾದ ಆಯುಧದಿಂದ ಹೊಡೆದಿರುವ ಶಂಕೆ ಇದೆ. ದುಷ್ಕರ್ಮಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಎಂದರು.