ಸುಳ್ಯ, ಜು.31: ಸುಳ್ಯದ ಪಂಜ ಸಮೀಪದ ಕೂತ್ಕುಂಜ ಗ್ರಾಮದ ಕಕ್ಯಾನ ಕಲ್ಕದ ಜಯಾನಂದ ಗೌಡ ನಾಪತ್ತೆ ಹಾಗೂ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಜಯಾನಂದ ಅವರನ್ನು ಅವರ ಪತ್ನಿ ಲಲಿತಾ ಅವರ ಕುಮ್ಮಕ್ಕಿನಿಂದ ಪಂಜ ಕರುಂಬು ನೆಕ್ಕಿಲದ ಧನಂಜಯ, ಚಂದ್ರಕಾಂತ್, ಮಜಲಡ್ಕ ಕಾಯಿಮಣದ ದಿನೇಶ್, ಕೊಪ್ಪ ಚಾರ್ವಾಕದ ಚಿಂತನ್ ಸೇರಿ ಕೊಲೆ ಮಾಡಿದ್ದು, ಬುಧವಾರ ಎಲ್ಲಾ ಕೊಲೆ ಆರೋಪಿಗಳನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ.
ಕಲ್ಕ ಜಯಾನಂದ ಅವರನ್ನು ಅಪಹರಿಸಿ ಕೊಲೆ ನಡೆಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಂಡ ಪೊಲೀಸರು, ಕೊಲೆಗೆ ಪ್ರೇರಣೆ ನೀಡಿದ ಆರೋಪದಲ್ಲಿ ಜಯಾನಂದರ ಪತ್ನಿ ಲಲಿತಾ, ಕೊಲೆ ಕೃತ್ಯದ ಪ್ರಮುಖ ಆರೋಪಿ ಧನಂಜಯ ನೆಕ್ಕಿಲ, ಕೊಲೆಗೆ ಸಹಕಾರ ನೀಡಿದ ಚಂದ್ರಕಾಂತ್ ನೆಕ್ಕಿಲ, ದಿನೇಶ್ ಮಜಲಡ್ಕ ಮತ್ತು ಚಿಂತನ್ ಚಾರ್ವಾಕ ಎಂಬವರನ್ನು ಬಂಧಿಸಿದ್ದಾರೆ. ಜಯಾನಂದರ ಪತ್ನಿ ಲಲಿತಾ ಹಾಗೂ ಧನಂಜಯನ ನಡುವೆ ಇದ್ದ ಅನೈತಿಕ ಸಂಬಂಧವೇ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಪ್ರಕರಣದ ಎಲ್ಲಾ ಆರೋಪಿಗಳನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ನಾಪತ್ತೆ: ಕಲ್ಕ ಜಯಾನಂದ ಜು.14ರಂದು ತಮ್ಮ ಮನೆಯಿಂದ ಬೈಕ್‌ನಲ್ಲಿ ಹೊರಟವರು ನಿಂತಿಕಲ್ಲಿನಿಂದ ಕಾಣಿಯೂರು ಗ್ರಾಮದ ಪುಣ್ಚತ್ತಾರಿನಲ್ಲಿರುವ ತಮ್ಮ ಸಹೋದರ ವಿಶ್ವನಾಥ ಎಂಬವರಿಗೆ ಕರೆ ಮಾಡಿ, ತಾನು ಕೂವೆತ್ತೋಡಿಯ ಜೋತಿಷ್ಯರಲ್ಲಿಗೆ ಹೋಗಿ ಬರುತ್ತೇನೆಂದು ಹೇಳಿದ್ದವರು ಸಂಜೆಯವರೆಗೂ ಅವರು ವಿಶ್ವನಾಥರ ಮನೆಗೆ ಹೋಗದೆ, ಅವರ ಮನೆಗೂ ವಾಪಸಾಗದೆ ನಾಪತ್ತೆಯಾಗಿದ್ದರು.
ಜಯಾನಂದ ಪತ್ತೆಯಾಗದ ಹಿನ್ನೆಲೆಯಲ್ಲಿ ಲಲಿತಾ ಜು.16ರಂದು ಸುಬ್ರಹ್ರಣ್ಯ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದರು. ಜಯಾನಂದರ ನಿಗೂಢ ನಾಪತ್ತೆ ಹಲವು ಅನುಮಾನಗಳಿಗೆ ಎಡೆ ಮಾಡಿತ್ತು. ನಂತರ ಬೆಳ್ಳಾರೆ ಸಮೀಪದ ನೆಟ್ಟಾರಿನಲ್ಲಿ ಅವರ ಬೈಕ್ ಪತ್ತೆಯಾಗಿದ್ದು, ಅದನ್ನು ಬೆಳ್ಳಾರೆ ಪೊಲೀಸರು ವಶಪಡಿಸಿಕೊಂಡಿದ್ದರು.
ಜಯಾನಂದ ಪ್ರತಿದಿನ ರಾತ್ರಿ ಒಬ್ಬಂಟಿಯಾಗಿ ತಮ್ಮ ಬೈಕ್‌ನಲ್ಲಿ ಮನೆಗೆ ಹೋಗುತ್ತಿದ್ದರು. ಈ ಬಗ್ಗೆ ಮಾಹಿತಿ ಅರಿತ ಆರೋಪಿಗಳು ನಾಪತ್ತೆ ಘಟನೆ ನಡೆಯುವ ಒಂದು ತಿಂಗಳ ಹಿಂದೆ ರಾತ್ರಿ ಜಯಾನಂದ ಒಂಟಿಯಾಗಿ ಬೈಕಿನಲ್ಲಿ ಮನೆಗೆ ಹೋಗುತ್ತಿದ್ದ ವೇಳೆ ಅವರನ್ನು ಹಿಂಬಾಲಿಸಿದ ಜೀಪೊಂದು ಬೈಕಿನ ಹಿಂಭಾಗಕ್ಕೆ ಢಿಕ್ಕಿ ಹೊಡೆದು ಪರಾರಿಯಾಗಿತ್ತು. ಇದರಿಂದ ಅಲ್ಪ ಸ್ವಲ್ಪಗಾಯಗೊಂಡಿದ್ದ ಜಯಾನಂದರು ಬಳಿಕ ಚೇತರಿಸಿಕೊಂಡಿದ್ದರು.
ಈ ಬಗ್ಗೆ ಜಯಾನಂದರು ಪೊಲೀಸರಿಗೆ ದೂರು ನೀಡಿರಲಿಲ್ಲ. ಈ ಪ್ರಕರಣದ ಜಾಡು ಹಿಡಿದ ಪೊಲೀಸರು ಈ ಜೀಪನ್ನು ನೆಕ್ಕಿಲದ ಧನಂಜಯ ಎಂಬಾತ ಚಲಾಯಿಸುತ್ತಿದ್ದ ಎಂಬ ಮಾಹಿತಿ ಪಡೆದು ಆತನ ಬಂಧನಕ್ಕೆ ಬಲೆ ಬೀಸಿದರು. ಇದಕ್ಕೂ ಮನ್ನ ಆತನ ಸಹವರ್ತಿ ಚಂದ್ರಕಾಂತ್ ಎಂಬಾತನ್ನು ವಶಕ್ಕೆ ಪಡೆದಿದ್ದರು.
ಬುಧವಾರ ಪಂಜ ಹಾಲು ಸೊಸೈಟಿ ಬಳಿ ಇದ್ದ ಧನಂಜಯ ಪೊಲೀಸ್ ಜೀಪನ್ನು ಕಂಡು ಅಲ್ಲಿಂದ ಓಡಿ ಪರಾರಿಯಾಗಿದ್ದ. ನಂತರ ಆತನನ್ನು ಬಂಧಿಸಿದ್ದ ಪೊಲೀಸರು ವಿಚಾರಣೆ ನಡೆಸಿದ್ದರು. ಈ ವೇಳೆ ತಾವು ಜಯಾನಂದರನ್ನು ಕೊಲೆ ಮಾಡಿರುವುದಾಗಿ ಧನಂಜಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೊಲೆಗೆ ಜಯಾನಂದರ ಪತ್ನಿ ಲಲಿತಾ ಪ್ರೇರಣೆ ನೀಡಿದ್ದರು ಎಂದು ಬಹಿರಂಗಪಡಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಗೆ ಸಹಕಾರ ನೀಡಿದ ಚಂದ್ರಕಾಂತ್, ಚಾರ್ವಾಕ ಕೊಪ್ಪ ನಿವಾಸಿ ಚಿಂತನ್, ಕಾಯಿಮಣ ಗ್ರಾಮದ ಮಜಲಡ್ಕ ದಿನೇಶ ಮತ್ತು ಕೊಲೆಗೆ ಪ್ರೇರಣೆ ನೀಡಿದ ಲಲಿತಾಳನ್ನು ಪೊಲೀಸರು ಬಂಧಿಸಿದರು. ಐವರೂ ಆರೋಪಿಗಳನ್ನು ಜಯಾನಂದರ ಮೃತದೇಹ ಪತ್ತೆಯಾದ ಕಾಡಿಗೆ ಕರೆದುಕೊಂಡು ಹೋದ ಪೊಲೀಸರು ಮಹಜರು ನಡೆಸಿದರು.
ಬಂಧಿತ ಐವರು ಆರೋಪಿಗಳನ್ನು ಗುರುವಾರ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಅವರಿಗೆ 2 ದಿನಗಳ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ.
ಎಸ್ಪಿ ಡಾ.ಶರಣಪ್ಪ, ಎಡಿಶನಲ್ ಎಸ್ಪಿ ವಿನ್ಸೆಂಟ್, ಶಾಂತಕುಮಾರ್, ಡಿವೈಎಸ್ಪಿ ಭಾಸ್ಕರ ರೈ ಅವರ ಮಾರ್ಗದರ್ಶನದಲ್ಲಿ ಸುಳ್ಯ ಸರ್ಕಲ್ ಇನ್ಸ್‌ಪೆಕ್ಟರ್ ಬಿ.ಎಸ್.ಸತೀಶ್, ಸಿಬ್ಬಂದಿ ಕೃಷ್ಣಯ್ಯ, ಮಾಧವ, ದೇವರಾಜ್, ಬಾಲಕೃಷ್ಣ, ದೇವರಾಜ್, ಸಂತೋಷ್ ನಾಯ್ಕ್, ಅಶೋಕ್, ಯೋಗಿತಾ, ಯಜ್ಞ ನಾರಾಯಣ, ಚಂದಪ್ಪ, ಚಂದ್ರಶೇಖರ, ಸರಸ್ವತಿ, ಸಂಧ್ಯಾಮಣಿ, ಸತೀಶ್, ಲಕ್ಷ್ಮೀಶ್, ಕಂಪ್ಯೂಟರ್ ವಿಭಾಗದ ಪ್ರಶಾಂತ್, ಸಂಪತ್, ಗೃಹ ರಕ್ಷಕ ದಳದ ಗಫೂರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು