ಪುಣೆ: ಹಠಾತ್ ಆಗಿ ಮಂಡ್ಯಕ್ಕೆ ಭೇಟಿ ನೀಡಿ ರೈತರಿಗೆ ಸಾಂತ್ವನ ಹೇಳಿದ್ದ ನಟಿ, ಮಾಜಿ ಸಂಸದೆ ರಮ್ಯಾ ಅಷ್ಟೇ ದಿಢೀರ್ ಆಗಿ ಸಿಎಂ ಸಿದ್ದರಾಮಯ್ಯ ಗೃಹ ಕಚೇರಿ ಕೃಷ್ಣಾದಲ್ಲೂ ಗುರುವಾರ ಕಾಣಿಸಿಕೊಂಡಿದ್ದರು, ಶುಕ್ರವಾರ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಜೊತೆ ಪುಣೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಸಕ್ರಿಯ ರಾಜಕೀಯದಲ್ಲಿ ಪಾಲ್ಗೊಳ್ಳುವ ಮುನ್ಸೂಚನೆ ನೀಡಿದ್ದಾರೆ.
ಇಂದು ಪುಣೆಯ ಎಫ್ ಟಿಐಐಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿ ನೀಡಿದ್ದರು. ಎಫ್ ಟಿಐಐ(ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ)ಗೆ ಗಜೇಂದ್ರ ಚೌಹಾಣ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರ ವಿರುದ್ಧ ವಿದ್ಯಾರ್ಥಿಗಳು ಕಳೆದ ಹಲವಾರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಜೊತೆ ರಾಹುಲ್ ಗಾಂಧಿ ಸಂವಾದ ನಡೆಸಿದ್ದರು. ರಾಹುಲ್ ಗೆ ಮಾಜಿ ಸಂಸದೆ ರಮ್ಯಾ, ನಟ ಚಿರಂಜೀವಿ ಸಾಥ್ ನೀಡಿದ್ದರು. ಬುಧವಾರ ದಿಢೀರ್ ಆಗಿ ಕಾಣಿಸಿಕೊಂಡಿದ್ದ ನಟಿ ರಮ್ಯಾ ಗೃಹ ಕಚೇರಿ ಕೃಷ್ಣಾಗೆ ಕೆಲ ಆಪ್ತರೊಂದಿಗೆ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ.
-ಉದಯವಾಣಿ