ನವದೆಹಲಿ, ಆ.1: ಈಗ ಭಾರತದೊಳಕ್ಕೆ ಭಾರೀ ಪ್ರಮಾಣದ ಚಿನ್ನ ಕಳ್ಳ ಸಾಗಣೆ ಮಾಡುವ ಮುಖ್ಯ ಸ್ಥಳ ಲಂಡನ್ ಎನ್ನಲಾಗಿದೆ! ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಸಿಬ್ಬಂದಿಯನ್ನು ಕಟ್ಟುನಿಟ್ಟಾಗಿ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಹೊಸದಾಗಿ ಆರಂಭವಾಗುವ ವಾಯುಸಾರಿಗೆ ವಿಮಾನಗಳಲ್ಲಿ ಇದು ಅತಿ ಹೆಚ್ಚು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ಲಂಡನ್‌ನ ಹಿಥ್ರೋ ವಿಮಾನ ನಿಲ್ದಾಣದಿಂದ ದೆಹಲಿಗೆ ಆಗಮಿಸಿದ ಜೆಟ್‌ಏರ್‌ಲೈನ್‌ನ ಸಿಬ್ಬಂದಿಯನ್ನು ಬಂಧಿಸಿ ಅವರಿಂದ ಸುಮಾರು 10 ಕೆ.ಜಿ ಚಿನ್ನ ವಶಪಡಿಸಿಕೊಳ್ಳಲಾಗಿತ್ತು.
ಅದೇ ರೀತಿ ಬರ್ಡ್‌ವರ್ಲ್ಡ್ ವೈಡ್ ಫ್ಲೈಟ್ ಸರ್ವೀಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪೆನಿಗೆ ಸೇರಿದ ವಿಮಾನದ ಸಿಬ್ಬಂದಿಯನ್ನು ಬಂಧಿಸಿ ಅವರಿಂದಲೂ ಭಾರೀ ಪ್ರಮಾಣದ ಚಿನ್ನ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಈ ಎಲ್ಲ ಚಿನ್ನ ಕಳ್ಳ ಸಾಗಣೆಯಾಗಿದ್ದು ಲಂಡನ್‌ನಿಂದಲೇ ಎಂಬುದು ಅಚ್ಚರಿ ವಿಷಯ.
ಚಿನ್ನ ಕಳ್ಳ ಸಾಗಣೆ ಮಾಡುವ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಲಂಡನ್ ಕೇಳಿ ಬರುತ್ತಿರುವುದು ಇದೇ ಮೊದಲ ಸಲ. ವಿಶೇಷವೆಂದರೆ, ಇದುವರೆಗಿನ ಎಲ್ಲಾ ದಾಖಲೆಗಳನ್ನು ಮುರಿದು, 2014-15ರ ಸಾಲಿನಲ್ಲಿ ವಿಮಾನ ನಿಲ್ದಾಣ ಅಧಿಕಾರಿಗಳು ವಶಪಡಿಸಿಕೊಂಡಿರುವ ಚಿನ್ನದ ಮೌಲ್ಯ ಬರೋಬ್ಬರಿ 1.125ಕೋಟಿ ರೂ.ಗಳು.