ನವದೆಹಲಿ, ಆ.1-ಸರ್ಕಾರದ ಸಬ್ಸಿಡಿ, ಪ್ರತಿಮನೆಗೂ ಅಡುಗೆ ಅನಿಲ ಪೂರೈಕೆ ಯೋಜನೆಗಳ ಅಬ್ಬರದ ಹೊರತಾಗಿಯೂ ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಮೂರನೇ ಎರಡರಷ್ಟು ಕುಟುಂಬಗಳು ಅಡುಗೆಗೆ ಉರುವಲು (ಸೌದೆ)ಗಳನ್ನೇ ಬಳಸುತ್ತಿವೆ ಎಂಬ ಕಹಿ ಸತ್ಯವನ್ನು ಸಂಸ್ಥೆಯೊಂದರ ಸಮೀಕ್ಷೆ ಹೊರಹಾಕಿದೆ.
ಬುಧವಾರ ತನ್ನ ಸಮೀಕ್ಷೆ ಬಿಡುಗಡೆ ಮಾಡಿರುವ ನ್ಯಾಷನಲ್ ಸ್ಯಾಂಪಲ್ಸ್ ಸರ್ವೆ (ಎನ್‌ಎಸ್‌ಎಸ್), ಒಲೆಗೆ ಸೌದೆ ಬಳಸುವವರ ಪ್ರಮಾಣ ತೀರಾ ನಿಧಾನಗತಿಯಲ್ಲಿ ಇಳಿಕೆಯಾಗುತ್ತಿದೆ. 1993-94ರಲ್ಲಿ ಕಟ್ಟಿಗೆ ಉರಿಸುವವರ ಸಂಖ್ಯೆ ಶೇ.78.2ರಷ್ಟಿದ್ದರೆ, 2011ರ ವೇಳೆಗೆ ಇದು ಕೇವಲ 67.3ಕ್ಕಷ್ಟೆ ಇಳಿಕೆಯಾಗಿದೆ.
ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಕಾಡಿನ ಸೌದೆಗಿಂತಲೂ ದನಗಳ ಸೆಗಣಿಯಿಂದ ತಟ್ಟುವ ಬೆರಣಿ (ಕುರುಳು) ಒಲೆ ಉರಿಸುವ ಪ್ರಮುಖ ಇಂಧನ ಮೂಲವಾಗಿದೆ. ಸೆಗಣಿ ಬೆರಣಿಗಳನ್ನು ತಟ್ಟಿ, ಅವನ್ನು ಒಣಗಿಸಿ ಶೇಖರಿಸಿಟ್ಟುಕೊಂಡು ಸೌದೆಯ ರೂಪದಲ್ಲಿ ಬಳಸಲಾಗುತ್ತದೆ.
ಇಂತಹ ರಾಜ್ಯಗಳಲ್ಲಿ ಉತ್ತರ ಪ್ರದೇಶ, ಪಂಜಾಬ್, ಹರ್ಯಾಣ, ಬಿಹಾರಗಳು ಪ್ರಮುಖವಾಗಿವೆ. ಕುಟುಂಬದ ಆದಾಯವನ್ನಲಂಬಿಸಿ ಈ ಉರುವಲು ಬಳಸಲಾಗುತ್ತದೆ. ತೀರಾ ಬಡವರು ಅಡವಿಯಲ್ಲಿ ದೊರೆಯುವ ಉರುವಲು, ಸ್ವಲ್ಪ ಅನುಕೂಲಕರವಾದವರು ಕುರುಳು (ಬೆರಣಿ) ಇನ್ನೂ ಸ್ವಲ್ಪ ಸ್ಥಿತಿವಂತರು ಸೀಮೆಎಣ್ಣೆ ಸ್ಟೌ ಹಾಗೂ ಹೆಚ್ಚು ಅನುಕೂಲಕರವಾಗಿರುವವರು ಗ್ಯಾಸ್ ಬಳಸುತ್ತಾರೆ. ಛತ್ತೀಸ್‌ಗಡದಲ್ಲಿ ಎಲ್‌ಪಿಜಿ ಬಳಸುವುದು ಕೇವಲ 1.5 ಗ್ರಾಮೀಣರು. ಜಾರ್ಖಂಡ್‌ನಲ್ಲಿ 2.9 ಆದರೆ ಒರಿಸ್ಸಾದಲ್ಲಿ ಶೇ. 3.9ರಷ್ಟು .