ಸ್ಯಾಂಡಲ್ ವುಡ್ ನಟಿ, ಮಾಜಿ ಸಂಸದೆ ರಮ್ಯಾ ಮೂರು ದಿನಗಳ ಹಿಂದಷ್ಟೇ ಕಾಲಿಗೆ ಬ್ಯಾಂಡೇಜ್ ಹಾಕಿಕೊಂಡು ಕುಂಟುತ್ತಾ ಮಂಡ್ಯ ಜಿಲ್ಲೆಯ ರೈತರ ಮನೆಗಳಿಗೆ ಕಷ್ಟಪಟ್ಟು ಭೇಟಿ ನೀಡಿದ್ದು, ಮೂರೇ ದಿನದಲ್ಲಿ ಅವರ ಸಮಸ್ಯೆ ಬಗೆಹರಿದಿದೆ.
ರೈತರ ಮನೆಗೆ ಭೇಟಿ ನೀಡಿದ್ದ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ರಮ್ಯಾ, ತಮ್ಮ ಕಾಲು ಉಳುಕಿದ್ದ ಕಾರಣ ವೈದ್ಯರು ಕೆಲ ದಿನಗಳ ಕಾಲ ವಿಶ್ರಾಂತಿಗೆ ಸೂಚಿಸಿದ್ದರು. ಈ ಕಾರಣಕ್ಕಾಗಿ ತಾವು ಜಿಲ್ಲೆಗೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲವೆಂದು ತಿಳಿಸಿದ್ದರು. ಅಲ್ಲದೇ ತಮ್ಮ ಕಾಲಿಗೆ ಹಾಕಿದ್ದ ಬ್ಯಾಂಡೇಜ್ ನಿಂದಾಗಿ ಕುಂಟುತ್ತಲ್ಲೇ ರಮ್ಯಾ ನಡೆದಾಡಿ ಮಂಡ್ಯ ರೈತರ ಅನುಕಂಪವನ್ನೂ ಗಿಟ್ಟಿಸಿಕೊಂಡಿದ್ದರು.
ಅಚ್ಚರಿಯೆಂಬಂತೆ ರಮ್ಯಾ ಮೂರೇ ದಿನಗಳಲ್ಲಿ ಪರ್ಫೆಕ್ಟ್ ಆಗಿದ್ದಾರೆ. ಪುಣೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಜೊತೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳಿದ್ದ ರಮ್ಯಾ ಇಂದು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣಾರನ್ನು ಅವರ ಸದಾಶಿವ ನಗರದ ಮನೆಯಲ್ಲಿ ಭೇಟಿ ಮಾಡಿ ರಾಜಕೀಯ ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ. ಒಂದು ಗಮನಿಸಬೇಕಾದ ಅಂಶವೆಂದರೆ ಮೂರು ದಿನಗಳ ಹಿಂದೆ ರೈತರನ್ನು ಭೇಟಿ ಮಾಡಲು ಹೋದಾಗ ಹಾಕಿಕೊಂಡು ಹೋಗಿದ್ದ ರಮ್ಯಾರ ಕಾಲಿನಲ್ಲಿ ಇಂದು ಬ್ಯಾಂಡೇಜ್ ಇರಲಿಲ್ಲ ಮತ್ತವರು ಕುಂಟುತ್ತಲೂ ಇರಲಿಲ್ಲ. ವೈದ್ಯ ಲೋಕ ನಿಜಕ್ಕೂ ವಿಸ್ಮಯವೇ ಸರಿ ಅಲ್ಲವೇ.