ತಿರುವನಂತಪುರಮ್: ಮೆದುಳು ನಿಷ್ಕ್ರಿಯಗೊಂಡಿದ್ದ ಬಾಲಕಿಯ ಅಂಗಾಂಗಳನ್ನು ದಾನ ಮಾಡಿದ್ದು, ಮೂರು ವರ್ಷದ ಈ ಮಗುವನ್ನು ಕೇರಳದ ಅತ್ಯಂತ ಕಿರಿಯ ಅಂಗಾಂಗ ದಾನಿ ಎಂದು ಗುರುತಿಸಲಾಗಿದೆ.
ಆಟವಾಡುತ್ತಿದ್ದಾಗ ತಲೆಗೆ ಏಟು ಬಿದ್ದು ಶನಿವಾರ ಇಲ್ಲಿನ ಎಸ್‌ಎಟಿ ಆಸ್ಪತ್ರೆಗೆ ದಾಖಲಾಗಿದ್ದ ಅಂಜನಾ ಎಂಬ ಬಾಲಕಿಯ ಮೆದುಳು ನಿಷ್ಕ್ರಿಯಗೊಂಡಿತ್ತು. ಬದುಕುಳಿಯುವ ಅವಕಾಶಗಳು ಕಡಿಮೆ, ಎಂಬುದನ್ನು ವೈದ್ಯರು ಬಾಲಕಿಯ ಪೋಷಕರಿಗೆ ಮನವರಿಕೆ ಮಾಡಿಕೊಟ್ಟು, ಅಂಗಾಂಗ ದಾನದ ಬಗ್ಗೆ ಅರಿವು ಮೂಡಿಸಿದ್ದರು. ಹೃದಯ ವೈಶಾಲ್ಯತೆ ತೋರಿದ ಪೋಷಕರು, ಮಗುವಿನ ಯಕೃತ್, ಎರಡು ಮೂತ್ರಪಿಂಡಗಳು ಹಾಗೂ ಕಣ್ಣುಗಳನ್ನು ದಾನ ಮಾಡಲು ಒಪ್ಪಿದರು.
ತಿರುವನಂತಪುರಮ್‌ನ ಕೇರಳ ವೈದ್ಯ ವಿಜ್ಞಾನ ಸಂಸ್ಥೆಯಲ್ಲಿ ದಾಖಲಾಗಿದ್ದ ಐದು ವರ್ಷದ ಬಾಲಕನಿಗೆ ಯಕೃತ್ ಮತ್ತು ಮೂತ್ರಪಿಂಡಗಳ ಕಸಿ ಮಾಡಲಾಯಿತು. ಶನಿವಾರ ರಾತ್ರಿ ಸುಮಾರು 11 ಗಂಟೆಗೆ ಆರಂಭವಾದ ಅಂಗಾಂಗ ಕಸಿ ಚಿಕಿತ್ಸೆ ಭಾನುವಾರ ಬೆಳಗ್ಗಿನ ಜಾವ ಮುಗಿಯಿತು. ಬಾಲಿಕಿಯ ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ.