ಹೊಸದಿಲ್ಲಿ: ಪುಣೆಯ ಪ್ರತಿಷ್ಠಿತ ಭಾರತೀಯ ಸಿನಿಮಾ ಮತ್ತು ಟಿವಿ ಸಂಸ್ಥೆ (ಎಫ್ಟಿಐಐ)ಗೆ ಅಧ್ಯಕ್ಷರಾಗಿ ಆಯ್ಕೆಯಾದ ಗಜೇಂದ್ರ ಚೌಹಾಣ್ ಪದಚ್ಯುತಿಗೆ ಆಗ್ರಹಿಸಿ, ವಿದ್ಯಾರ್ಥಿಗಳು ಪ್ರತಿಭಟಿಸುತ್ತಿದ್ದಾರೆ. ದೇಶದ ಪ್ರತಿಷ್ಠಿತ ನಟರ ಹೆಸರಿದ್ದರೂ ಚೌಹಾಣ್ ಅವರನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಿದ್ದಾದರೂ ಏಕೆ?
ಬಿ.ಆರ್.ಛೋಪ್ರಾ ನಿರ್ದೇಶನದ ಮಹಾಭಾರತದಲ್ಲಿ ಯುಧಿಷ್ಠರನ ಪಾತ್ರಧಾರಿಯಾಗಿದ್ದ ಎಂಬ ಕಾರಣಕ್ಕೆ! ಹಾಗೆಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದೆ.
‘ಮಹಾಭಾರತದ ಅಗ್ರಜ ಪಾಂಡವ ಯುಧಿಷ್ಠರನಾಗಿ ನಟಿಸಿದ ಖ್ಯಾತಿ ಚೌಹಾಣ್ ಅವರಿಗಿದೆ. ಅಲ್ಲದೇ 150 ಸಿನಿಮಾ ಮತ್ತು 600 ಟಿವಿ ಧಾರವಾಹಿಗಳಲ್ಲಿ ನಟಿಸಿದ್ದಾರೆ,’ ಎಂದು ಬಹುತೇಕ ಒಂದೇ ಪ್ಯಾರಾದಲ್ಲಿ ಸಚಿವಾಲಯ ಉತ್ತರಿಸಿದೆ.
ಚೌಹಾಣ್ಗೆ ಬಿಜೆಪಿಯೊಂದಿಗಿನ ಸಂಪರ್ಕದಿಂದಾಗಿ ಎನ್ಡಿಎ ಸರಕಾರ ಎಫ್ಟಿಐಐ ಮುಖ್ಯಸ್ಥರನ್ನಾಗಿ ಆರಿಸಿದೆ, ಎನ್ನಲಾಗುತ್ತಿದೆ. ಮಾಹಿತಿ ಹಕ್ಕು ಅಡಿಯಲ್ಲಿ ಚೌಹಾಣ್ ಅವರ ಶೈಕ್ಷಣಿಕ ಮತ್ತು ಔದ್ಯೋಗಿಕ ಅರ್ಹತೆ ಬಗ್ಗೆ ಪ್ರಶ್ನಿಸಲಾಗಿತ್ತು.
ಸ್ಥಾನವನ್ನು ಅಲಂಕರಿಸಲು ಪ್ರಸ್ತಾಪವಿದ್ದ ಇತರರ ಬಗ್ಗೆ ಸುಮಾರು 281 ಪುಟಗಳ ಮಾಹಿತಿ ನೀಡಿದ ಸಚಿವಾಲಯ, ಚೌಹಾಣ್ ಬಗ್ಗೆ ಕೇವಲ ಒಂದೇ ಪ್ಯಾರಾದಲ್ಲಿ ಉತ್ತರಿಸಿದೆ.
ಅಡೂರ್ ಗೋಪಾಲಕೃಷ್ಣನ್, ಅಮಿತಾಬ್ ಬಚ್ಚನ್, ಜಯಾ ಬಚ್ಚನ್, ರಾಜು ಹಿರಾನಿ, ರಜನೀಕಾಂತ್, ವಿನೋದ್ ಚೋಪ್ರಾ ಮುಂತಾದ ಮಹಾನ್ ನಟರ ಹೆಸರುಗಳು ಪ್ರತಿಷ್ಠಿತ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಪ್ರಸ್ತಾಪಿತವಾಗಿದ್ದರೂ, ಚೌಹಾಣ್ ಅವರನ್ನು ಸ್ಥಾನದಲ್ಲಿ ಕೂರಿಸಿದ್ದಕ್ಕೆ ಅತೀವ ವಿರೋಧ ವ್ಯಕ್ತವಾಗುತ್ತಿದೆ.