ಬೈಕಂಪಾಡಿ: ಎಂ.ಆರ್. ಪಿ. ಎಲ್‌ನ ಕೋಕ್ ಹಾಗೂ ಸಲ್ಫರ್ ಘಟಕ ಮುಚ್ಚಲು ಒತ್ತಾಯಿಸಿ ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ವತಿಯಿಂದ ಸೋಮವಾರ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.
ಇಂದು ಬೆಳಿಗ್ಗೆ 10 ಗಂಟೆಗೆ ನಾಗರಿಕ ಹೋರಾಟ ಸಮಿತಿಯ ಸದಸ್ಯರು ಜೋಕಟ್ಟೆ ವತಿಯಿಂದ ಬೈಕಂಪಾಡಿ ಜಂಕ್ಷನ್ ನಿಂದ ಕೈಗಾರಿಕಾ ವಲಯದಲ್ಲಿರುವ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಗೆ ಪೊರಕೆ, ಲಾಠಿ ಹಿಡಿದು ಮೆರವಣಿಗೆಯಲ್ಲಿ ತೆರಳಿದರು.
ಬಳಿಕ ಪ್ರತಿಭಟನಕಾರರನ್ನುದ್ದೇಶಿಸಿ ಪ್ರತಿಭಟನೆಯ ನೇತ್ರತ್ವ ವಹಿಸಿದ್ದ ಡಿವೈಎಫ್ಐ ಅಧ್ಯಕ್ಷ ಮುನೀರ್ ಕಾಟಿಪಳ್ಳಿ ಮಾತನಾಡಿ, ಅಕ್ರಮ ಕೋಕ್, ಸಲ್ಫರ್ ಘಟಕಗಳಿಂದ ಪರಿಸರ ಮಲಿನಗೊಳ್ಳುತ್ತಿದ್ದು, ಕೋಕ್ ಮತ್ತು ಸಲ್ಫರ್ ಘಟಕದಿಂದಾಗುತ್ತಿರುವ ಪರಿಸರ ಮಾಲಿನ್ಯವನ್ನು ನಿಯಂತ್ರಿಸುವಲ್ಲಿ ವಿಫಲವಾಗಿರುವ ಮಾಲಿನ್ಯ ನಿಯಂತ್ರಣ ಮಂಡಳಿಯ ಕ್ರಮವನ್ನು ಖಂಡಿಸುವುದಾಗಿ ತಿಳಿಸಿದರು.
ಕೋಕ್ ಹಾಗೂ ಸಲ್ಫರ್ ಘಟಕದ ಪರವಾಣಿಗೆನ್ನು ನವೀಕರಿಸಬಾರದು. ಬದಲಾಗಿ ಕೋಕ್ ಸಲ್ಫರ್ ಘಟಕವನ್ನು ಕೂಡಲೇ ಮುಚ್ಚಬೇಕು ಎಂದು ಅವರು ಆಗ್ರಹಿಸಿದರು.
ಕೈಯಲ್ಲಿ ಲಾಠಿ, ಪೊರಕೆ ಹಿಡಿದ ನೂರಾರು ನಾಗರೀಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.