ಕುಂದಾಪುರ: ಬೈಕ್ ಹಾಗೂ 407 ಗೂಡ್ಸ್ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸಹಸವಾರ ದಾರುಣವಾಗಿ ಮೃತಪಟ್ಟು ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಸೋಮವಾರ ಸಂಜೆ ಕೊಲ್ಲೂರು-ಹೆಮ್ಮಾಡಿ ರಾಜ್ಯ ಹೆದ್ದಾರಿಯ ಕಟ್-ಬೆಲ್ತೂರು ರೈಲ್ವೇ ಬ್ರಿಡ್ಜ್ ಸಮೀಪ ಸಂಭವಿಸಿದೆ.
ಹೆಮ್ಮಾಡಿ ಕಟ್ಟು ನಿವಾಸಿ ದಿ.ಅಣ್ಣಪ್ಪ ಗಾಣಿಗ ಅವರ ಪುತ್ರ ಸುರೇಂದ್ರ ಗಾಣಿಗ (31) ಅಪಘಾತದಲ್ಲಿ ಸಾವನ್ನಪ್ಪಿದ ಬೈಕ್‌ನಲ್ಲಿದ್ದ ಹಿಂಬದಿ ಸವಾರ. ಬೈಕ್ ಚಲಾಯಿಸುತ್ತಿದ್ದ ಹೆಮ್ಮಾಡಿ ನಿವಾಸಿ ಸಂಪತ್ ಪೂಜಾರಿ (26) ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆ ವಿವರ: ಹೆಮ್ಮಾಡಿಯಲ್ಲಿ ದಿನಸಿ ಅಂಗಡಿಯಿಟ್ಟುಕೊಂಡಿದ್ದ ಸಂಪತ್ ಪೂಜಾರಿ ಹಾಗೂ ಶಾಮಿಯಾನ ವೃತ್ತಿ ಮಾಡುತ್ತಿದ್ದ ಸುರೇಂದ್ರ ಗಾಣಿಗ ಸ್ನೇಹಿತರಾಗಿದ್ದು ಸಂಪತ್ ಪೂಜಾರಿ ಮೂರು ದಿನಗಳ ಹಿಂದಷ್ಟೇ ಖರೀದಿಸಿದ ನೂತನ ಪಲ್ಸರ್ ಬೈಕಿನಲ್ಲಿ ಹೆಮ್ಮಾಡಿಯಿಂದ ವಂಡ್ಸೆಯತ್ತ ಸಾಗುತ್ತಿರುವಾಗ ರಾಜ್ಯ ಹೆದ್ದಾರಿಯ ಕಟ್-ಬೆಲ್ತೂರು ಸಮೀಪದ ರೈಲ್ವೇ ಬ್ರಿಡ್ಜಿನಲ್ಲಿ ಹೆಮ್ಮಾಡಿಯತ್ತ ಸಾಗುತ್ತಿದ್ದ 407 ಗೂಡ್ಸ್ ವಾಹನ ಮುಖಾಮುಖಿಯಾಗಿ ಡಿಕ್ಕಿಹೊಡೇದಿದೆ. ಡಿಕ್ಕಿಯ ರಭಸಕ್ಕೆ ಸಂಪತ್ ಹಾಗೂ ಸುರೇಂದ್ರ ಇಬ್ಬರು ರಸ್ತೆಗೆಸೆಯಲ್ಪಟ್ಟಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡ ಸುರೇಂದ್ರ ಗಾಣಿಗ ಅವರು ಸ್ಥಳದಲ್ಲಿಯೇ ಮ್ರತಪಟ್ಟಿದ್ದು ಸಂಪತ್ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಖಾಸಗಿ ಆಸ್ಪೆತ್ರೆಗೆ ದಾಖಲಿಸಲಾಗಿದೆ.
ಮ್ರತ ಸುರೇಂದ್ರ ಗಾಣಿಗ ಅವರು ಈ ಮೊದಲು ಕೊಲ್ಲೂರು ಹಾಸ್ಟೆಲಿನಲ್ಲಿ ಅಡುಗೆ ವೃತ್ತಿ ಮಾಡಿಕೊಂಡಿದ್ದು ಕಳೆದ ಆರು ತಿಂಗಳಿನಿಂದ ಗೆಳೆಯನೊಂದಿಗೆ ಪಾಲುದಾರಿಕೆಯಲ್ಲಿ ಶ್ಯಾಮಿಯಾನ ವೃತ್ತಿ ಮಾಡಿಕೊಂಡಿದ್ದಾರೆ. ಕಳೆದ 8 ತಿಂಗಳ ಹಿಂದಷ್ಟೇ ಇವರ ವಿವಾಹವು ನಡೆದಿತ್ತು ಎನ್ನಲಾಗಿದೆ.
ಶಾಸಕ ಕೆ.ಗೋಪಾಲ ಪೂಜಾರಿ ಭೇಟಿ: ಅಪಘಾತ ನಡೆದ ಸ್ಥಳಕ್ಕೆ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ, ಕಟ್‌ಬೆಲ್ತೂರು ಪಂಚಾಯತ್ ಉಪಾಧ್ಯಕ್ಷ ಶರತ್ ಶೆಟ್ಟಿ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.