ಕನ್ನಡ ವಾರ್ತೆಗಳು

ಸ್ಟುಡಿಯೋಗೆ ನುಗ್ಗಿ ಯುವತಿಯ ಮಾನಭಂಗಕ್ಕೆ ಪ್ರಯತ್ನಿಸಿ,ಕೊಲೆಗೆ ಯತ್ನ :ಆರೋಪಿಯನ್ನು ಅರೆನಗ್ನಗೊಳಿಸಿ ಕಂಬಕ್ಕೆ ಕಟ್ಟಿದ ಸ್ಥಳೀಯರು

Pinterest LinkedIn Tumblr

udp

ಕಾರ್ಕಳ, ಆ.4- ಗ್ಯಾರೇಜ್ ಕಾರ್ಮಿಕನೋರ್ವ ಗ್ರಾಹಕನ ಸೋಗಿನಲ್ಲಿ ಫೋಟೋ ಸ್ಟುಡಿಯೋಕ್ಕೆ ತೆರಳಿ ಅಲ್ಲಿಯ ಮಹಿಳಾ ಉದ್ಯೋಗಿಯ ಮಾನಭಂಗಕ್ಕೆ ಪ್ರಯತ್ನಿಸಿ, ಕೊಲೆಗೈಯ್ಯಲು ಮುಂದಾದ ಘಟನೆ ತಾಲೂಕಿನ ಈದು ಗ್ರಾಮದ ಹೊಸ್ಮಾರಿನಲ್ಲಿ ನಿನ್ನೆ ನಡೆದಿದೆ. ಆರೋಪಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.

ಸ್ಥಳೀಯ ಗ್ಯಾರೇಜೊಂದರ ಕಾರ್ಮಿಕ, ಹೊಸ್ಮಾರು ಮಂಗಳಾ ಫಾರಂ ಬಳಿಯ ನಿವಾಸಿ ಬಾಬು ಮೇರ ಎನ್ನುವವರು ಪುತ್ರ ಸತೀಶ್ ಮೇರ (19) ಬಂಧಿತ ಆರೋಪಿಯಾಗಿದ್ದಾನೆ.

ಹೊಸ್ಮಾರು ಪೇಟೆಯಲ್ಲಿರುವ ನಾಗಪ್ರಸಾದ್ ಕಟ್ಟಡದಲ್ಲಿ ಶೀತಲ್ ಕೆ ಜೈನ್ ಎನ್ನುವವರು ನಿಸರ್ಗ ಸ್ಟು‌ಡಿಯೋ ಹೊಂದಿದ್ದಾರೆ. ಸ್ಟುಡಿಯೋದ ಮಾಲಕರು ನಿನ್ನೆ ಮಧ್ಯಾಹ್ನ ಊಟಕ್ಕೆ ತೆರಳಿದ್ದ ಸಂದರ್ಭ ಸಾಧಿಸಿ ಅಲ್ಲಿಗೆ ಹೋಗಿದ್ದ ಸತೀಶ್ ಅಲ್ಲಿದ್ದ 18 ವರ್ಷದ ಯುವತಿಯ ಬಳಿ ತನ್ನ ಫೋಟೋ ತೆಗೆಯುವಂತೆ ತಿಳಿಸಿದ್ದ. ಯುವತಿ ಫೋಟೋ ತೆಗೆದು ಅದನ್ನು ಕ್ಲೀನ್ ಮಾಡುತ್ತಿದ್ದಾಗ ಸತೀಶ್ ಹಿಂದಿನಿಂದ ಬಂದು ಸರಿಗೆಯೊಂದನ್ನು ಆಕೆಯ ಕುತ್ತಿಗೆಗೆ ಸುತ್ತಿ ಕೊಲೆಗೆ ಯತ್ನಿಸಿದ್ದ. ಯುವತಿ ಬೊಬ್ಬೆ ಹೊಡೆದಾಗ ಪಕ್ಕದ ಅಂಗಡಿಗಳವರು ಧಾವಿಸಿ ಬಂದಾಗ ಪರಾರಿಯಾಗಲು ಯತ್ನಿಸಿದ್ದ.

ಸ್ಥಳೀಯರು ಆತನನ್ನು ಅರೆನಗ್ನಗೊಳಿಸಿ ಕಂಬವೊಂದಕ್ಕೆ ಕಟ್ಟಿಹಾಕಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

Write A Comment