ಮಂಗಳೂರು,ಅ.04 : ಬೆಳ್ತಂಗಡಿ ತಾಲೂಕಿನ ನೆರಿಯಾ ಗ್ರಾಮದ ಕಾಟಾಜೆ ನಿವಾಸಿ ಸುಂದರ ಮಲೆಕುಡಿಯ ಎಂಬುವರ ಮೇಲೆ ಸ್ಥಳಿಯ ಗೋಪಾಲಕೃಷ್ಣ ಗೌಡ ಎಂಬವರು ಅಮಾನವೀಯವಾಗಿ ವರ್ತಿಸಿ ದೌರ್ಜನ್ಯವೆಸಗಿರುವುದನ್ನು ಬಿಜೆಪಿ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸುತ್ತದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಪ್ರತಾಪಸಿಂಹ ನಾಯಕ್ ತಿಳಿಸಿದ್ದಾರೆ.
ಒಂದು ಕೈಯ ಬೆರಳುಗಳನ್ನು ಕಳೆದುಕೊಂಡು ಇನ್ನೊಂದು ಕೈ ಗಂಭೀರವಾಗಿ ಗಾಯಗೊಂಡಿರುವ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಂದರ ಅವರನ್ನು ಬಿಜೆಪಿಯ ಮುಖಂಡರು (04.08.2015)ಮಂಗಳವಾರ ಭೇಟಿ ನೀಡಿ ಸಾಂತ್ವನ ಹೇಳಿದರು.
ಕಳೆ ಕೊಚ್ಚುವ ಯಂತ್ರದಿಂದ ದೌರ್ಜನ್ಯವೆಸಗಿರುವ ಆರೋಪಿಯನ್ನು ಸಮಾಜದಲ್ಲಿ ಸಂಘರ್ಷ ಮತ್ತು ಅಶಾಂತಿ ನಿರ್ಮಾಣವಾಗುವ ಮೊದಲೇ ಪೊಲೀಸರು ತಕ್ಷಣ ಬಂಧಿಸಿ ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.
ಈ ಸಂದರ್ಭ ಪಕ್ಷದ ಎಸ್.ಸಿ.ಮೋರ್ಚಾದ ರಾಜ್ಯ ಕಾರ್ಯದರ್ಶಿ ಭಾಗೀರಥಿ ಮುರುಳ್ಯಾ, ಪಕ್ಷದ ಪ್ರಧಾನ ಕಾರ್ಯದರ್ಶಿ ಸಂಜೀವ ಮಠಂದೂರು, ವಿಧಾನ ಪರಿಷತ್ ಮಾಜಿ ಸದಸ್ಯ ಮೊನಪ್ಪ ಭಂಡಾರಿ ಉಪಸ್ಥಿತರಿದ್ದರು.