ಬೆಂಗಳೂರು: ‘ಲಿಬಿಯಾದಲ್ಲಿ ಐಸಿಸ್ ಉಗ್ರರಿಂದ ಅಪಹೃತರಾಗಿ, ಒತ್ತೆಯಾಳಾಗಿರುವ ಇಬ್ಬರು ಭಾರತೀಯರು ಸುರಕ್ಷಿತವಾಗಿದ್ದಾರೆ,’ ಎಂದು ಉಗ್ರರಿಂದ ಅಪಹರಿಸಲ್ಪಟ್ಟು, ಬಿಡುಗಡೆಯಾಗಿರುವ ಲಕ್ಷ್ಮೀಕಾಂತ್ ರಾಮಕೃಷ್ಣ ಹೇಳಿದ್ದಾರೆ.
ಬಂಧಿತರ ಸುರಕ್ಷತೆ ಬಗ್ಗೆ ವಿಚಾರಿಸಲು ಉಗ್ರರು ವಿಶೇಷ ಫೋನ್ ನಂಬರ್ ನೀಡಿರುವುದಾಗಿ ಹೇಳಿದ್ದು, ಅವರನ್ನು ಸಂಪರ್ಕಿಸಲು ಯತ್ನಿಸುತ್ತಿರುವುದಾಗಿಯೂ ರಾಜ್ಯಕ್ಕೆ ಮರಳಿರುವ ಲಕ್ಷ್ಮೀಕಾಂತ್ ತಿಳಿಸಿದ್ದಾರೆ.
‘ಅಪಹೃತ ಭಾರತೀಯರು ಸುರಕ್ಷಿತವಾಗಿದ್ದು, ಅವರ ಬಗ್ಗೆ ಚಿಂತಿಸುವ ಅಗತ್ಯವಿಲ್ಲವೆಂದು ಉಗ್ರರ ಬಾಸ್ ಅಥವಾ ಶೇಕ್ ನನಗೆ ತಿಳಿಸಿದ್ದಾರೆ,’ ಎಂದಿದ್ದಾರೆ.
ಈ ವಿಷಯದಲ್ಲಿ ಮಾಧ್ಯಮ ಜವಾಬ್ದಾರಿಯಿಂದ ನಡೆದುಕೊಳ್ಳಬೇಕೆಂದು ಅವರೂ ಆಗ್ರಹಿಸಿದ್ದಾರೆ.
ಲಿಬಿಯಾದ ಸಿರ್ತೆ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಕನ್ನಡಿಗರೂ ಸೇರಿ ನಾಲ್ವರು ಭಾರತೀಯರನ್ನು ಇಸ್ಲಾಮಿಕ್ ಸ್ಟೇಟ್ ಉಗ್ರರು ಜುಲೈ 29ರಂದು ಅಪಹರಿಸಿದ್ದರು. ಅವರಲ್ಲಿ ಹೈದರಾಬಾದ್ ಮೂಲದ ಇಬ್ಬರನ್ನು ಇನ್ನೂ ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿರುವ ಉಗ್ರರು, ಇಬ್ಬರು ಕನ್ನಡಿಗರನ್ನು ಬಿಡುಗಡೆಗೊಳಿಸಿದ್ದಾರೆ.