ಉಡುಪಿ: ಉಡುಪಿ ಕಡೆಯಿಂದ ಕುಂದಾಪುರದತ್ತ ಸಾಗುತ್ತಿದ್ದ ಹತ್ತು ಚಕ್ರದ ಲಾರಿಯೊಂದು ಎದುರಿನ ಬೈಕ್ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಲಾರಿ ಚಕ್ರದಡಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಉಡುಪಿ ತಾಲೂಕಿನ ಕೋಟ ಸಮೀಪದ ತೆಕ್ಕಟ್ಟೆ ಎಂಬಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.
ಅಪಘಾತದಲ್ಲಿ ಸಾವನ್ನಪ್ಪಿದ ಬೈಕ್ ಸವಾರನನ್ನು ತೆಕ್ಕಟ್ಟೆ ನಿವಾಸಿ ರೂಪೇಶ್ ಭಂಡಾರಿ (25) ಎಂದ್ಮು ಗುರುತಿಸಲಾಗಿದ್ದು, ಅವರು ತೆಕ್ಕಟ್ಟೆಯಲ್ಲಿ ನಿಶಾಲ್ ಹೇರ್ಡ್ರೆಸರ್ಸ್ ಎಂಬ ಸೆಲೂನ್ ಶಾಪ್ (ಕ್ಷೌರದಂಗಡಿ) ನಡೆಸುತ್ತಿದ್ದಾರೆ.
ಘಟನೆ ವಿವರ: ರೂಪೇಶ್ ಭಂಡಾರಿ ಅವರು ತೆಕ್ಕಟ್ಟೆಯಿಂದ ಮನೆಗೆ ತೆರಳುತ್ತಿರುವ ಸಂದರ್ಭ ಉಡುಪಿಯಿಂದ ಕುಂದಾಪುರದ ಕಡೆಗೆ ಹೋಗುತ್ತಿದ್ದ ಈ ಬ್ರಹತ್ ಲಾರಿಯು ಹಿಂಬದಿಯಿಂದ ಡಿಕ್ಕಿಯಾಗಿದ್ದಲ್ಲದೇ ಹಲವು ದೂರ ಬೈಕ್ ಸಮೇತ ಸವಾರನನ್ನು ಎಳೆದುಸಾಗಿತ್ತು. ಅಪಘಾತದ ತೀವ್ರತೆಯಿಂದಾಗಿ ಬೈಕ್ ಸವಾರ ಲಾರಿಯ ಚಕ್ರದಡಿಗೆ ಸಿಲುಕಿದ್ದು ಅವರನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಲು ಸಾರ್ವಜನಿಕರು ಕೆಲಕಾಲ ಹರಸಾಹಸಪಟ್ಟರು. ಗಂಭೀರವಾಗಿ ಗಾಯಗೊಂಡಿದ್ದ ರೂಪೇಶ್ ಅವರನ್ನು ತಕ್ಷಣ ತೆಕ್ಕಟ್ಟೆ -ಫ್ರೆಂಡ್ಸ್ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನವನ್ನು ಮಾಡಲಯಿತಾದರೂ ಕೂಡ ಮಾರ್ಗಮಧ್ಯೆ ರೂಪೇಶ್ ಭಂಡಾರಿ ಕೊನೆಯುಸಿರೆಳೆದಿದ್ದಾರೆ.
ಮೃತರು ಅವಿವಾಹಿತರಾಗಿದ್ದು, ತಂದೆ, ತಾಯಿ ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾರೆ.
ಕೋಟ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.