ಮಂಗಳೂರು,ಆಗಸ್ಟ್.05: ಯಾಂತ್ರಿಕೃತ ಮೀನುಗಾರಿಕಾ ದೋಣಿಗಳಿಗೆ ನೀಡುವ ಡೀಸೆಲ್ ಸಬ್ಸಿಡಿಯನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸುವ ರಾಜ್ಯ ಸರ್ಕಾರದ ಹೊಸ ಕ್ರಮವನ್ನು ಖಂಡಿಸಿ ಮಂಗಳೂರು ಟ್ರಾಲ್ ಬೋಟ್ ಮೀನುಗಾರರ ಸಂಘ, ಕರ್ನಾಟಕ ಪರ್ಸಿನ್ ಮೀನುಗಾರರ ಸಂಘ ಹಾಗೂ ಮಂಗಳೂರಿನ ಎಲ್ಲಾ ಮೀನುಗಾರರ ಸಂಘಟನೆಯ ನೇತ್ರದಲ್ಲಿ ಬುಧವಾರ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಮೀನುಗಾರರ ಮುಖಂಡರು, ಯಾಂತ್ರಿಕೃತ ಮೀನುಗಾರಿಕಾ ದೋಣಿಗಳಿಗೆ ನೀಡುವ ಡೀಸೆಲ್ ಸಬ್ಸಿಡಿಯನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸುವ ಹೊಸ ಕ್ರಮವನ್ನು ರಾಜ್ಯ ಸರ್ಕಾರ ಕೂಡಲೇ ಹಿಂಪಡೆಯ ಬೇಕು ಎಂದು ಆಗ್ರಹಿಸಿದರು. ಮಾತ್ರವಲ್ಲದೇ ಸಬ್ಸಿಡಿಯನ್ನು ಖಾತೆಗೆ ಹಾಕದೆ ಡೆಲಿವರಿ ಪಾಯಿಂಟ್ ಗೆ ತಲುಪಿಸುವ ಈಗಿನ ಪದ್ದತಿಯನ್ನು ಹಾಗೆಯೇ ಮುಂದುವರಿಸಬೇಕು. ಒಂದು ಪಡಿತರ ಚೀಟಿಯಲ್ಲಿ ಕುಟುಂಬದ ಒಬ್ಬ ಸದಸ್ಯನಿಗೆ ಮಾತ್ರ ದೋಣಿ ಎಂಬ ಕಾನೂನನ್ನು ತಿದ್ದುಪಡಿ ಮಾಡಬೇಕು. ಪ್ರತಿ ದೋಣಿಗೆ ದಿನವೊಂದಕ್ಕೆ ನೀಡಲಾಗುತ್ತಿರುವ 300 ಲೀಟರ್ ಡೀಸೆಲ್ ಕೋಟವನ್ನು 600 ಲೀಟರ್ ಗೆ ಏರಿಸಬೇಕು.ತಿಂಗಳುವಾರು ಕೊಡುತ್ತಿದ್ದ ಡೀಸೆಲ್ ಕೋಟವನ್ನು ವರ್ಷದ ಕೋಟದಲ್ಲಿ ನೀಡಬೇಕು. ಈಗಾಗಲೇ ಸಾಧ್ಯತೆ ಪತ್ರ ಇಲ್ಲದೆ ಮೀನುಗಾರಿಕೆ ನಡೆಸುವ ಬೋಟುಗಳಿಗೆ ಸಾಧ್ಯತೆ ಪತ್ರ ನೀಡಿ ಸಕ್ರಮಗೊಳಿಸಬೇಕು. ದೂರದ ಮೀನುಗಾರಿಕೆಗೆ ಅನುಕೂಲವಾಗುವಂತೆ ಇಂಜಿನ್ ನ ಅಶ್ವ ಶಕ್ತಿಯನ್ನು 350ರಿಂದ 500ಕ್ಕೆ ಏರಿಸಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಸಭೆಯ ಮೊದಲು ನಗರದ ರಸ್ತೆಯಲ್ಲಿ ಮೀನುಗಾರರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ಪ್ರತಿಭಟನೆಯಲ್ಲಿ ಮೀನುಗಾರರ ಮುಖಂಡರು, ವ್ಯಾಪಾರಸ್ಥರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಮೀನುಗಾರರು ಪಾಲ್ಗೊಂಡಿದ್ದರು.
ಪ್ರತಿಭಟನೆಯ ಬಳಿಕ ಮೀನುಗಾರರ ಮುಖಂಡರ ನಿಯೋಗದಿಂದ ಮೀನುಗಾರರ ಪ್ರಮುಖ ಆರು ಬೇಡಿಕೆಗಳ ಮನವಿಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.