ಕರ್ನಾಟಕ

ಮಾದಕ ವಸ್ತು ಆನ್‌ಲೈನ್ ಮಾರಾಟ ಮಾಲು ವಶ; ಮೂವರ ಸೆರೆ

Pinterest LinkedIn Tumblr

211

ಬೆಂಗಳೂರು, ಆ.5: ಆನ್‌ಲೈನ್ ಮೂಲಕ ಚರಸ್ ಇನ್ನಿತರ ಮಾದಕ ವಸ್ತುಗಳನ್ನು ತರಿಸಿಕೊಂಡು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು 2 ಲಕ್ಷ 20 ಸಾವಿರ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಲೊಟ್ಟೆಗೊಲ್ಲಹಳ್ಳಿಯ ಮಣಿಕಂಠನ್ (24), ದೇವಸಂದ್ರದ ಜಾಗ್ ಸಾಯಿ ಪ್ರವೇಶ್ (28), ಬನಶಂಕರಿಯ ದಿಬ್‌ಯೆಂದು ರಾಯ್ (26) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತ ಮಣಿಕಂಠನ್ ಕುಮಾರ ಸ್ವಾಮಿ ಬಡಾವಣೆಯ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ದ್ವಿಚಕ್ರ ವಾಹನದಲ್ಲಿ ಮಾದಕ ವಸ್ತುವನ್ನು ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಆರೋಪಿಯು ಆನ್‌ಲೈನ್‌ನಲ್ಲಿ ಮಾದಕ ವಸ್ತು ಎಕ್ಸ್‌ಟೆಸಿ ಪಿಲ್ಸ್ (ಎಂ.ಡಿ.ಎಂ.ಎ) ಗಳನ್ನು ಬಂಧಿತ ಇನ್ನಿಬ್ಬರು ಆರೋಪಿಗಳಿಂದ ತರಿಸಿಕೊಳ್ಳುತ್ತಿದ್ದನು. ಮಾದಕ ವಸ್ತು ಎಲ್.ಎಸ್.ಡಿ ಬ್ಲಾಟ್‍ಗಳನ್ನು ಗೋವಾದಿಂದ, ಗಾಂಜಾ ಹಾಗೂ ಚರಸ್ ಅನ್ನು ಚೆನ್ನೈನಿಂದ ಸಾಗಾಣಿಕೆ ಮಾಡಿಕೊಂಡು ಬಂದು, ಇವುಗಳನ್ನು ದಯಾನಂದಸಾಗರ ಇಂಜಿನಿಯರಿಂಗ್ ಕಾಲೇಜ್, ಡಿಗ್ರಿ ಕಾಲೇಜ್, ಎಂ.ಎಸ್. ರಾಮಯ್ಯ ಕಾಲೇಜು ಮತ್ತು ಪಿ.ಇ.ಎಸ್. ಕಾಲೇಜಿನ ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದು ವಿಚಾರಣೆಯಲ್ಲಿ ತಿಳಿದುಬಂದಿದೆ.

ಬಂಧಿತರಿಂದ 2 ಲಕ್ಷ 20 ಸಾವಿರ ರೂ. ಮೌಲ್ಯದ, 8 ಗ್ರಾಂ ತೂಕದ 17 ಎಕ್ಸ್‌ಟೆಸಿ ಪಿಲ್ಸ್‌ಗಳು (ಎಂ.ಡಿ.ಎಂ.ಎ), 0.1 ಗ್ರಾಂ ತೂಕದ 4 ಎಲ್.ಎಸ್.ಡಿ ಬ್ಲಾಟ್‍ಗಳು, 90 ಗ್ರಾಂ ತೂಕದ ಗಾಂಜಾ, 23 ಗ್ರಾಂ ತೂಕದ ಚರಸ್, 4 ಮೊಬೈಲ್ ಫೋನ್, ಆಪಲ್ ಕಂಪನಿಯ 2 ಲ್ಯಾಪ್‌ಟಾಪ್ ಮತ್ತು ಕೃತ್ಯಕ್ಕೆ ಉಪಯೋಗಿಸಿದ 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ರಮೇಶ್ ತಿಳಿಸಿದ್ದಾರೆ.

Write A Comment