ಬಸ್ ಮೇಲೆ ವಾಸ್ಕೋಡಿಗಾಮ ಚಿತ್ರ ಭರ್ಜರಿಯಾಗಿ ಓಡುತ್ತಿದೆ.
ಆದರೆ ಚಿತ್ರ ಬಿಡುಗಡೆಯಾಗಿ ಅಷ್ಟೇ ಭರ್ಜರಿಯಾಗಿ ಓಡುತ್ತದೆಯೇ ಅನ್ನೋ ಪ್ರಶ್ನೆ ಗಾಂಧಿನಗರದಲ್ಲಿ ಉದ್ಭವವಾಗಿದೆ. ಅದಕ್ಕೆ ಕಾರಣವೂ ಇದೆ.
ವಾಸ್ಕೋಡಿಗಾಮ ಚಿತ್ರೀಕರಣ ಶುರುವಾದದ್ದು ಕಳೆದ ವರ್ಷ ಅಣ್ಣಾವ್ರ ಹುಟ್ಟುಹಬ್ಬದಂದು. ಕನ್ನಡದ ನಟಸಾರ್ವಭೌಮನ ಜನ್ಮದಿನದಂದು ಹುಟ್ಟಿದ ವಾಸ್ಕೋಡಿಗಾಮ ಇನ್ನೂ ಬಿಡುಗಡೆಯಾಗದೆ ಇರುವುದು ಕುತೂಹಲಕರ. ಆದರೆ ವಾಸ್ಕೋಡಿಗಾಮ ಚಿತ್ರ ಆಗಸ್ಟ್ 27 ರಂದು ಬಿಡುಗಡೆಯಾಗಲಿದೆ ಎನ್ನುತ್ತಾರೆ ಚಿತ್ರದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಶರತ್. ಶರತ್ ರ ಪ್ರಕಾರ, ಚಿತ್ರದ ಹಾಡುಗಳು ಕ್ರಮೇಣ ಹಿಟ್ ಆಗಿವೆ. ಎಲ್ಲ ಜನರನ್ನೂ ತಲುಪುವ ಗ್ರಾಫ್ ಏರುತ್ತಿದೆ. ಶರತ್ ಹೇಳುತ್ತಿರುವುದು ನಿಜವಿರಬಹುದೆಂದು ಕೊಂಡರೆ ಅದು ನಿಜವಲ್ಲ ಎಂದು ತಿಳಿದುಕೊಳ್ಳಲು ಹೆಚ್ಚು ಸಮಯ ಹಿಡಿಯುವುದಿಲ್ಲ.
ವಾಸ್ಕೋಡಿಗಾಮ ಒಂದು ಯೂಥ್ಫುಲ್ ಚಿತ್ರ. ಅಶ್ವಿನ್ ನಿರ್ಮಾಣದ, ಮಧುಚಂದ್ರ ನಿರ್ದೇಶನದ, ಕಿಶೋರ್- ಪಾರ್ವತಿ ನಾಯರ್ ನಟಿಸಿರುವ ಚಿತ್ರಕ್ಕೆ ಸಂಗೀತ ನೀಡಿರುವುದು ಲೂಸಿಯಾ ಚಿತ್ರದ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ. ತೇಜಸ್ವಿ ಇಲ್ಲಿಯೂ ತಾವು ಯಶಸ್ವಿಯಾಗಿ ಸಂಗೀತ ನೀಡುವ ಕೆಲಸ ಮುಂದುವರಿಸಿದ್ದಾರೆ. ಹಾಡುಗಳಲ್ಲಿನ ಲಯ ಮತ್ತು ಮಧುಚಂದ್ರರ ಸಾಹಿತ್ಯ ಕಾಲೇಜು ಹುಡುಗರ ಮನಸ್ಸನ್ನು ಗೆಲ್ಲೋದರಲ್ಲಿ ಅನುಮಾನವೇ ಇರಲಿಲ್ಲ. ಆದರೆ ಸಂಗೀತವನ್ನಾಗಲೀ, ಚಿತ್ರವನ್ನಾಗಲೀ ಪ್ರಮೋಟ್ ಮಾಡುವ ಮಹತ್ವಾಕಾಂಕ್ಷೆಯೇ ಚಿತ್ರತಂಡಕ್ಕಿಲ್ಲ ಎಂಬಂತೆ ಹಾಡು ಸದ್ದುಗದ್ದಲವಿಲ್ಲದೆ ಮೂಲೆಗುಂಪಾಗಿದೆ ಎನ್ನುತ್ತಾರೆ ಗಾಂಧಿನಗರದ ಪಂಡಿತರು. ಕೆಲವು ಚಿತ್ರಗಳು ಸಂಗೀತದಿಂದಲೇ ಜನರನ್ನು ಥಿಯೇಟರ್ ಗೆ ಸೆಳೆದಿರುವ ಉದಾಹರಣೆಗಳಿರುವಾಗ ವಾಸ್ಕೋಡಿಗಾಮ ಆ ಪ್ರಯತ್ನದಲ್ಲಿ ಯಾಕೆ ಯಶಸ್ವಿಯಾಗುತ್ತಿಲ್ಲ ಅನ್ನುವುದು ಯೋಚಿಸಬೇಕಿರುವ ವಿಷಯ.
ಲೂಸಿಯಾದ ನಿರ್ದೇಶಕ ಪವನ್ ಕುಮಾರ್ ರ ಮಾರ್ಕೆಟಿಂಗ್ ಸ್ಕಿಲ್ ಇದೇ ಚಿತ್ರತಂಡಕ್ಕೂ ಇದ್ದಿದ್ದರೆ ಎನ್ನುವ ಬಿಟ್ಟಿ ಸಲಹೆಯನ್ನೂ ಕೊಡುವವರಿದ್ದಾರೆ. ಕೇವಲ ಆನ್ ಲೈನಲ್ಲೇ ಆಟವಾಡಿ ಗೆಲ್ಲಬಲ್ಲ ಪವನ್ ರ ಅದೃಷ್ಟ, ವಾಸ್ಕೋಡಿಗಾಮನಿಗೆ ಮಾದರಿಯಾಗಬಹುದೇ ನೋಡಬೇಕು.
ಈ ಹಿಂದೆ ಸೈಬರ್ ಯುಗದೊಳ್ ರಮ್ಯಪ್ರೇಮ ಕಾವ್ಯಂ ನಿರ್ಮಿಸಿದ್ದ ಇದೇ ಚಿತ್ರತಂಡ ಚಂದನವನದಲ್ಲಿ ಚೆಂದವಾಗಿ ಅರಳಿ ನಿಲ್ಲಲಿ ಎಂಬ ಆಸೆ ಕನ್ನಡ ಪ್ರೇಕ್ಷಕನಿಗೆ. ಅಂದಹಾಗೆ ಸೈಬರ್ ಯುಗದಲ್ಲಿ ಚಿತ್ರಗಳ ಫಲಿತಾಂಶ ಸೈಬರ್ ಗಳಲ್ಲೇ ನಿರ್ಧರಿತವಾಗುತ್ತೆ ಅನ್ನೋದಕ್ಕೆ ಇತ್ತೀಚಿನ ಉದಾಹರಣೆ ರಂಗಿತರಂಗಿ. ಆನ್ ಲೈನಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ಸುದ್ದಿಯ ತರಂಗಗಳನ್ನು ಎಬ್ಬಿಸಿಯೇ ಚಿತ್ರ ಧೂಳೆಬ್ಬಿಸಿದ್ದು ಅಲ್ಲವೇ?