ಮುಂಬಯಿ: ದೇಶದ 9 ನಗರಗಳ ಪೈಕಿ ಜೀವನ ಮಾಡಲು ಮುಂಬಯಿ ತೀರಾ ದುಬಾರಿ ನಗರವೆನಿಸಿದರೆ, ಪಂಜಾಬ್-ಹರಿಯಾಣಾದ ಜಂಟಿ ರಾಜಧಾನಿ ಚಂಡಿಗಢ ಅಗ್ಗದ ನಗರ ಎಂಬ ಅಗ್ಗಳಿಕೆಗೆ ಪಾತ್ರವಾಗಿದೆ.
ಪ್ರವಾಸದ ಕುರಿತು ಮಾಹಿತಿ ನೀಡಲು ಮೀಸಲಾಗಿರುವ ‘ಟ್ರಿಪ್‌ಅಡ್ವೈಸರ್’ ಪೋರ್ಟಲ್ ನಡೆಸಿರುವ ‘ಟ್ರಿಪ್‌ಇಂಡೆಕ್ಸ್ ಸಿಟೀಸ್’ ಎಂಬ ವಾರ್ಷಿಕ ಸಮೀಕ್ಷೆಯಲ್ಲಿ ಈ ವಿಷಯ ಬಹಿರಂಗವಾಗಿದೆ.
ಬೆಂಗಳೂರು, ದಿಲ್ಲಿ, ಮುಂಬಯಿ, ಚೆನ್ನೈ, ಪುಣೆ, ಹೈದರಾಬಾದ್, ಜೈಪುರ, ಕೋಲ್ಕೊತಾ ಮತ್ತು ಚಂಡಿಗಢ ನಗರಗಳಲ್ಲಿ ಜೂನ್-ಆಗಸ್ಟ್ ತಿಂಗಳ ನಡುವೆ ಇಬ್ಬರು ವ್ಯಕ್ತಿಗಳಿಗೆ ತಂಗಲು ತಗಲುವ ವೆಚ್ಚವನ್ನು ಲೆಕ್ಕ ಮಾಡಲಾಗಿದೆ.
ಫೋರ್‌ಸ್ಟಾರ್ ಹೋಟೆಲ್‌ನಲ್ಲಿ ಮೂರು ರಾತ್ರಿ ವಾಸ್ತವ್ಯ ಹೂಡಲು, ಉಪಾಹಾರ, ಮಧ್ಯಾಹ್ನದ ಭೋಜನ ಮತ್ತು ರಾತ್ರಿಯೂಟ, ಹೋಟೆಲ್‌ನಿಂದ ಪ್ರವಾಸಿ ಸ್ಥಳಗಳಿಗೆ ತೆರಳಲು ತಗಲುವ ಟ್ಯಾಕ್ಸಿ ಮತ್ತಿತರ ಸಾರಿಗೆ ವೆಚ್ಚವನ್ನು ಸರ್ವೆಯಲ್ಲಿ ಪರಿಗಣಿಸಲಾಗಿತ್ತು.
ಈ ಪ್ರಕಾರ, ವಾರಾಂತ್ಯದಲ್ಲಿ ಇಬ್ಬರು ಮೂರು ದಿನ ಹಾಯಾಗಿ ಕಳೆಯಲು ಭರ್ತಿ 39,956 ರೂ. ಖರ್ಚಾಗುತ್ತದೆ. ಆದರೆ, ಚಂಡಿಗಢದಲ್ಲಿ ಬರೀ 21,849 ರೂ. ಸಾಕು. ಇಬ್ಬರು 2 ಮೈಲಿ ಪ್ರಯಾಣ ಮಾಡಲು ಮುಂಬಯಿಯಲ್ಲಿ 949 ರೂ. ತೆರಬೇಕು. ಆದರೆ ಚಂಡಿಗಢದಲ್ಲಿ 150 ರೂ.ಗೆಲ್ಲ ಆರೂವರೆ ಕಿ.ಮೀ. ದೂರವನ್ನು ಟ್ಯಾಕ್ಸಿಯಲ್ಲಿ ಕ್ರಮಿಸಬಹುದು.
ಐಷಾರಾಮಿ ಹೋಟೆಲ್‌ನಲ್ಲಿ ಮೂರು ದಿನ ರಾತ್ರಿಯೂಟ ಮಾಡಲು ಚೆನ್ನೈನಲ್ಲಿ 16, 245 ರೂ. ಅಗತ್ಯವಾದರೆ, ಚಂಡಿಗಢದಲ್ಲಿ 7,596 ರೂ. ಸಾಕು. ಚೆನ್ನೈನ ನಂತರದಲ್ಲಿ ಕೋಲ್ಕೊತಾ ಹಾಗೂ ಬೆಂಗಳೂರು ಇದ್ದು, ಇವು ಅತ್ತ ದುಬಾರಿಯೂ ಅಲ್ಲ, ಇತ್ತ ಅಗ್ಗವೂ ಅಲ್ಲ ಎಂದೆನಿಸಿಕೊಂಡಿವೆ.
ಇದೇ ಸಂಸ್ಥೆ ಈ ಹಿಂದೆ ನಡೆಸಿದ್ದ ಜಾಗತಿಕ ಸರ್ವೆಯಲ್ಲಿ ಮುಂಬಯಿ ನಗರವು ಜಗತ್ತಿನಲ್ಲೇ ಐದನೇ ಅಗ್ಗದ ನಗರಿಯಾಗಿ ಹೊರಹೊಮ್ಮಿತ್ತು. ಜಗತ್ತಿನ ಬಜೆಟ್‌ಫ್ರೆಂಡ್ಲಿ ನಗರಗಳ ಪಟ್ಟಿಯಲ್ಲಿ (2015ನೇ ಸಾಲಿನ) ಹೆನಯ್ (ವಿಯೆಟ್ನಾಂ), ವಾರ್ಸಾ (ಪೋಲೆಂಡ್), ಶರ್ಮ್ ಎಲ್ ಶೇಖ್ (ಈಜಿಪ್ತ್), ಬ್ಯಾಂಕಾಕ್ (ಥಾಯ್ಲೆಂಡ್) ನಂತರ ಮುಂಬಯಿ ಇತ್ತು. ಅಂದಹಾಗೆ, ಜಗತ್ತಿನ ಅತ್ಯಂತ ದುಬಾರಿ ನಗರಗಳ ಪಟ್ಟಿಯಲ್ಲಿ ಕಂಕುನ್ (ಮೆಕ್ಸಿಕೊ), ಜ್ಯೂರಿಚ್ (ಸ್ವಿಜರ್ಲೆಂಡ್), ನ್ಯೂಯಾರ್ಕ್ (ಅಮೆರಿಕ), ಲಂಡನ್ (ಬ್ರಿಟನ್) ಹಾಗೂ ಪಂಟಾ ಕೆನಾ (ಕೆರಿಬಿಯನ್) ನಗರಗಳಿದ್ದವು.
ಅರಮನೆಗಳೇ ಚೀಪ್! ಮೂರು ರಾತ್ರಿ ಐಷಾರಾಮಿ ಹೋಟೆಲ್‌ನಲ್ಲಿ ಉಳಿದುಕೊಳ್ಳಲು ಮುಂಬಯಿಯಲ್ಲಿ 23,092 ರೂ. ಬಾಡಿಗೆ ತೆರಬೇಕು. ಆದರೆ, ಅರಮನೆಗಳೇ ಐಷಾರಾಮಿ ಹೋಟೆಲ್‌ಗಳಾಗಿರುವ ರಾಜಸ್ಥಾನದ ಜೈಪುರದಲ್ಲಿ 10,650 ರೂ.ಗೆಲ್ಲ ಮೂರು ರಾತ್ರಿ ವಾಸ್ತವ್ಯ ಹೂಡಬಹುದು. ಐಷಾರಾಮಿ ವಾಸ್ತವ್ಯದ ವಿಚಾರದಲ್ಲಿ ಜೈಪುರವು ಚಂಡಿಗಢವನ್ನೂ ಸೈಡ್ ಹೊಡೆದಿದ್ದು, ಕಡಿಮೆ ಹಣದಲ್ಲಿ ಅರಮನೆಗಳಲ್ಲಿ ತಂಗಬಹುದಾಗಿದೆ.