ಮಂಗಳೂರು : ನೀರಿನ ಪೈಪ್‍ಲೈನ್ ಬಗ್ಗೆ ಮುಂಜಾಗೃತಾ ಕ್ರಮ ವಹಿಸುವಲ್ಲಿ ಅಧಿಕಾರಿಗಳು ವಿಫಲರಾದ ಹಿನ್ನೆಲೆಯಲ್ಲಿ ಐದು ದಿನಗಳ ಕಾಲ ನೀರಿಲ್ಲದೆ ಜನರಿಗೆ ಆಗಿರುವ ಸಮಸ್ಯೆ ಬಗ್ಗೆ ವಿಷಾದವಿದೆ.ತುಂಬೆಯಿಂದ ನಗರಕ್ಕೆ ನೀರು ಸರಬರಾಜಾಗುವ ಪೈಪ್‍ಲೈನ್‍ನ್ನು ಸುರಕ್ಷಿತವಾಗಿಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದು ಮೇಯರ್ ಜೆಸಿಂತಾ ವಿಜಯಾ ಆಲ್ಫ್ರೆಡ್ ತಿಳಿಸಿದ್ದಾರೆ.
ಬುಧವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪೈಪ್‍ಲೈನ್ ಹಾದುಹೋಗಿರುವ ಜಾಗದವರು ಸಂಪರ್ಕ ರಸ್ತೆ ಅಗತ್ಯವೆನಿಸಿದಲ್ಲಿ ಪಾಲಿಕೆಯಿಂದ ಅನುಮತಿ ಪಡೆದು ಎಂಜಿನಿಯರ್ ಸಲಹೆ ಪಡೆದುಕೊಳ್ಳುವುದು ಕಡ್ಡಾಯ ಎಂದು ಸ್ಪಷ್ಟಪಡಿಸಿದರು. ಪೈಪ್‍ಲೈನ್ ಹಾದು ಹೋಗುವ ಪ್ರದೇಶದ ಭೂಸ್ವಾಧೀನಗೊಂಡ ಜಾಗವನ್ನು ಸರ್ವೆ ಮಾಡಲಾಗುವುದು, ಜಾಗದ ಗಡಿ ಗುರುತಿಸಿ ಕಲರ್ ಪ್ಲಗ್ ಅಳವಡಿಸಲಾಗುವುದು ಹಾಗೂ ಅಲ್ಲಲ್ಲಿ ಸೂಚನಾ ಫಲಕ ಅಳವಡಿಸಲಾಗುವುದು. ಮುಂದೆ ಈ ರೀತಿ ಆಗದಂತೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.
ಒಡೆದ ಪೈಪ್ ಲೈನ್ ದುರಸ್ತಿಗಾಗಿ 0.70 ಟನ್ ಸಾಮರ್ಥ್ಯದ 2 ಹಿಟಾಚಿ ಯಂತ್ರ, ಜೆಸಿಬಿ ಯಂತ್ರ, 2 ಟಿಪ್ಪರ್, 1 ಕೆ.ಡಬ್ಲ್ಯು. ಸಿಂಗಲ್ ಪೀಸ್ ಜನರೇಟರ್ ಹಾಗೂ ಕೂಲಿಯಾಳುಗಳನ್ನು ಬಳಸಿ ರಾತ್ರಿ ಹಗಲು ಕಾರ್ಯಾಚರಣೆ ನಡೆಸಿ ದುರಸ್ತಿಗೊಳಿಸಲಾಯಿತು ಎಂದು ಅವರು ಹೇಳಿದರು.
ಇದೇ ಸಂದರ್ಭ ಇನ್ನೊಂದು ಕಡೆ ಸೋರಿಕೆಯಾಗಿರುವುದು ಕಂಡುಬಂದಿದ್ದು, ಆ ಪ್ರದೇಶದಲ್ಲಿ ಮಣ್ಣು ತುಂಬಿಸಿದ್ದರಿಂದ ಮತ್ತೆ 2.10 ಸಾಮರ್ಥ್ಯದ 2 ಹಿಟಾಚಿ ಯಂತ್ರ, 1.75 ಸಾಮರ್ಥ್ಯದ ಹಿಟಾಚಿ ಯಂತ್ರ, 20 ಎಚ್.ಪಿ. ಸಬ್‍ಮರ್ಸಿಬಲ್ ಪಂಪ್, ಮೂರು 5 ಎಚ್.ಪಿ. ಪಂಪ್ ಸೆಟ್, ಎರಡು 3 ಎಚ್.ಪಿ. ಪಂಪ್‍ಸೆಟ್, 40 ಕಿ.ವ್ಯಾಟ್ ಮತ್ತು 120 ಕಿ.ವ್ಯಾಟ್ ತಿಪೀಸ್ ಜನರೇಟರ್, ಸಿಂಗಲ್ ಪೀಸ್ ಜನರೇಟರ್ ಬಳಸಿ ದುರಸ್ತಿಗೊಳಿಸಲಾಯಿತು.
ಪದೇ ಪದೇ ಮಳೆ ಬರುತ್ತಿದ್ದ ಕಾರಣ ಹಾಗೂ ಜೇಡಿ ಮಣ್ಣು ಕುಸಿತವಾಗುತ್ತಿದ್ದ ಕಾರಣ ಕಾಮಗಾರಿ ಪೂರ್ಣಗೊಳಿಸುವುದು ವಿಳಂಬವಾಯಿತು ಎಂದು ಅವರು ತಿಳಿಸಿದರು. ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ದೀಪಕ್ ಪೂಜಾರಿ ಮಾತನಾಡಿ, ಕಂದಾಯ ಇಲಾಖೆ ಮೂಲಕ ಸರ್ವೆ ನಡೆಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ ಎಂದರು.
ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ತೆರಿಗೆ ಹಣಕಾಸು ಮತ್ತು ಅಪೀಲು ಸ್ಥಾಯಿ ಸಮಿತಿ ಅಧ್ಯಕ್ಷ ಹರಿನಾಥ್, ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಕಾಶ್ ಬಿ.ಸಾಲ್ಯಾನ್, ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷ ಕೇಶವ, ಕಾರ್ಪೋರೇಟರ್ ಲ್ಯಾನ್ಸ್‍ಲೋಟ್ ಪಿಂಟೋ, ಪ್ರಭಾರ ಆಯುಕ್ತ ಗೋಕುಲ್‍ದಾಸ್ ನಾಯಕ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಎಡಿಬಿ ಕಾಮಗಾರಿಯ ಪೈಪ್‍ಲೈನ್ ಪ್ರಥಮ ಬಾರಿಗೆ ಒಡೆದುಹೋಗಿರುವುದು, ಇದರಿಂದ ಸಮಸ್ಯೆ ಆಗಿದೆ. ಈಗಾಗಲೇ ಕಣ್ಣೂರು ಬಳಿ ನೀರಿನ ಕೊಳವೆ ಒಡೆಯಲು ಆ ಜಾಗದಲ್ಲಿ ಕಟ್ಟಡ ತ್ಯಾಜ್ಯ ಹಾಗೂ ಮಣ್ಣು ಹಾಕಿರುವುದು ಮುಖ್ಯ ಕಾರಣವಾಗಿದ್ದು, ಅದನ್ನು ಹಾಕಿದವರ ವಿರುದ್ಧ ಒಂದು ವಾರದೊಳಗೆ ಎಫ್‍ಐಆರ್ ದಾಖಲಿಸಲಾಗುವುದು ಎಂದು ಮುಖ್ಯ ಸಚೇತಕ ಶಶಿಧರ್ ಹೆಗ್ಡೆ ತಿಳಿಸಿದರು.
ಮಣ್ಣು ಹಾಕಿದವರಿಂದಲೇ ಈಗಾಗಲೇ ಆಗಿರುವ ದುರಸ್ತಿ ವೆಚ್ಚವನ್ನು ಭರಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದ ಅವರು, ಜತೆಗೆ ತುಂಬೆಯಿಂದ ನಗರದ ವಿವಿಧೆಡೆ ನೀರು ಸರಬರಾಜಾಗುವ ಪೈಪ್‍ಲೈನ್ ಸುರಕ್ಷತೆ ಬಗ್ಗೆ ಪ್ರತ್ಯೇಕ ಸಮಿತಿ ರಚಿಸುವುದಲ್ಲದೆ, ಪೈಪ್‍ಲೈನ್ ಬಗ್ಗೆ ನಿಗಾ ವಹಿಸಲು ಸಿಬ್ಬಂದಿಯೊಬ್ಬರನ್ನು ನೇಮಕ ಮಾಡುವುದಾಗಿ ತಿಳಿಸಿದರು.