ನವದೆಹಲಿ: ನಿನ್ನೆ ಉಧಾಂಪುರ ದಾಳಿಯ ವೇಳೆ ಓರ್ವ ಉಗ್ರನನ್ನು ಜೀವಂತವಾಗಿ ಸೆರೆ ಹಿಡಿದಿರುವ ಭಾರತ, ಉಗ್ರರ ಕೃತ್ಯಗಳ ಹಿಂದಿನ ಪಾಕಿಸ್ತಾನದ ಕೈವಾಡವನ್ನು ಬಹಿರಂಗಪಡಿಸಲು ಮತ್ತೊಂದು ಪ್ರಬಲ ಸಾಕ್ಷ್ಯ ಲಭ್ಯವಾಗಿದೆ ಎಂದು ಭಾವಿಸಿದೆ. ಆದರೆ ಪಾಕಿಸ್ತಾನ ಮಾತ್ರ ತನ್ನ ಹಳೇ ಚಾಳಿಯನ್ನು ಮುಂದುವರೆಸಿದ್ದು, ಸೆರೆ ಸಿಕ್ಕ ಉಗ್ರ ಮೊಹಮ್ಮದ್ ನಾವೇದ್ ಅಲಿಯಾಸ್ ಉಸ್ಮಾನ್ ನಮ್ಮ ದೇಶದವನಲ್ಲ ಎಂದು ಗುರುವಾರ ಹೇಳಿದೆ.
ಮೊಹಮ್ಮದ್ ನಾವೇದ್ ಪಾಕಿಸ್ತಾನದ ಪ್ರಜೆ ಅಲ್ಲ. ನಮ್ಮ ದೇಶದ ನೋಂದಣಿ ವಿವರದಲ್ಲಿ ಆ ವ್ಯಕ್ತಿಯ ಚಹರೆಯವರು ಯಾರೂ ಇಲ್ಲ ಎಂದು ಪಾಕಿಸ್ತಾನದ ರಾಷ್ಟ್ರೀಯ ನೋಂದಣಿ ಸಂಸ್ಥೆ ಸ್ಪಷ್ಟಪಡಿಸಿದೆ ಎಂದು ‘ದುನ್ಯಾ ನ್ಯೂಸ್’ ವರದಿ ಮಾಡಿದೆ.
ಈ ಹಿಂದೆ 2008ರ ಮುಂಬೈ ದಾಳಿಯ ಉಗ್ರ ಅಜ್ಮಲ್ ಕಸಬ್ ಕೂಡ ನಮ್ಮವನಲ್ಲ ಎಂದು ಪಾಕಿಸ್ತಾನ ವಾದಿಸಿತ್ತು. ಆದರೆ ಅಜ್ಮಲ್ ಕಸಬ್ ಪಾಕಿಸ್ತಾನ ಪ್ರಜೆ ಅಂತ ಅಲ್ಲಿನ ಮಾಧ್ಯಮಗಳೇ ಬಹಿರಂಗಪಡಿಸಿದ್ದವು. ಈಗ ಮತ್ತೆ ಅದೇ ರೀತಿ ನಾವೇದ್‌ನನ್ನು ಪಾಕಿಸ್ತಾನ ಅಲ್ಲಗಳೆಯುತ್ತಿದೆ.